ಕೋಲಾರ: ಈ ಬಾರಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ನಮ್ಮ ಹೊಸ ಸರ್ಕಾರ ರಚನೆಯಾದ ಮೊದಲ ಸಂಪುಟ ಸಭೆಯಲ್ಲೇ ಪಕ್ಷದಿಂದ ಘೋಷಿಸಲಾದ ಎಲ್ಲ ಚುನಾವಣಾ ಭರವಸೆಗಳನ್ನು ಸರ್ಕಾರ ಅಧಿಕೃತವಾಗಿ ಅಂಗೀಕರಿಸಿ ಈಡೇರಿಸಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿಳಿಸಿದರು.
ಕೋಲಾರದಲ್ಲಿ ಕಾಂಗ್ರೆಸ್ ಇಂದು ಹಮ್ಮಿಕೊಂಡಿದ್ದ 'ಜೈ ಭಾರತ್' ಸಮಾವೇಶದಲ್ಲಿ ಮಾತನಾಡಿದ ಅವರು, ''ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ತಿಂಗಳು ಉಚಿತವಾಗಿ 200 ಯೂನಿಟ್ ವಿದ್ಯುತ್ ನೀಡುವ ಗೃಹ ಜ್ಯೋತಿ, ಪ್ರತಿ ಮನೆಯ ಯಜಮಾನಿಗೆ ತಿಂಗಳಿಗೆ 2,000 ರೂ. ನೀಡುವ ಗೃಹ ಲಕ್ಷ್ಮಿ, ಬಿಪಿಎಲ್ ಕುಟುಂಬದ ಪ್ರತಿ ಸದಸ್ಯರಿಗೆ ಪ್ರತಿ ತಿಂಗಳು 10 ಕೆಜಿ ಅಕ್ಕಿ ವಿತರಿಸುವ ಅನ್ನಭಾಗ್ಯ ಹಾಗೂ ಯುವ ನಿಧಿ ಯೋಜನೆ ಮೂಲಕ ನಿರುದ್ಯೋಗಿ ಪದವೀಧರರಿಗೆ ಮಾಸಿಕ 3,000 ರೂ. ಮತ್ತು ಡಿಪ್ಲೊಮಾ ಹೊಂದಿರುವವರಿಗೆ ಮಾಸಿಕ 1,500 ರೂಪಾಯಿಯನ್ನು ಎರಡು ವರ್ಷಗಳವರೆಗೆ ನೀಡಲಾಗುತ್ತದೆ. ಈ ಯೋಜನೆಗಳನ್ನು ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಮೊದಲ ದಿನವೇ ಜಾರಿಗೆ ತರಲಾಗುವುದು'' ಎಂದು ಭರವಸೆ ನೀಡಿದರು.
ಇದೇ ವೇಳೆ ಕೇಂದ್ರ ಬಿಜೆಪಿ ಸರ್ಕಾರವ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್, ''ಪ್ರಧಾನಿ ನರೇಂದ್ರ ಮೋದಿಯವರು ಅದಾನಿಗೆ ಸಾವಿರಾರು ಕೋಟಿ ಕೊಟ್ಟರೆ, ನಾವು ಬಡವರು ಮತ್ತು ಮಹಿಳೆಯರಿಗೆ ಹಣ ನೀಡಬಹುದು'' ಎಂಬ ಸಂದೇಶವನ್ನು ದೇಶಕ್ಕೆ ರವಾನಿಸುವಂತೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ಕರೆ ನೀಡಿದರು. ಮುಂದುವರೆದು, ''ನೀವು (ಪ್ರಧಾನಿ ಮೋದಿ) ಪೂರ್ಣ ಹೃದಯದಿಂದ ಅದಾನಿಗೆ ಸಹಾಯ ಮಾಡಿದರೆ, ನಾವು (ಕಾಂಗ್ರೆಸ್) ಬಡವರು, ನಿರುದ್ಯೋಗಿ ಯುವಕರು ಮತ್ತು ಮಹಿಳೆಯರಿಗೆ ಸಹಾಯ ಮಾಡುತ್ತೇವೆ. ನೀವು ನಿಮ್ಮ ಕೆಲಸವನ್ನು ಮಾಡಿ, ನಾವು ನಮ್ಮ ಕೆಲಸವನ್ನು ಮಾಡುತ್ತೇವೆ ಎಂದು ಕುಟುಕಿದರು.
ಬಸವರಾಜ ಬೊಮ್ಮಾಯಿ ಸರ್ಕಾರದ ವಿರುದ್ಧ ಕೂಡ ಟೀಕೆ ನಡೆಸಿದ ಕಾಂಗ್ರೆಸ್ ನಾಯಕ, ''ರಾಜ್ಯ ಬಿಜೆಪಿ ಸರ್ಕಾರದಲ್ಲಿ ಗುತ್ತಿಗೆದಾರರು ಮತ್ತು ಖಾಸಗಿ ಶಾಲೆಗಳಿಂದ ಶೇ.40ರಷ್ಟು ಕಮಿಷನ್ಗೆ ಬೇಡಿಕೆ ಇಡಲಾಗಿದೆ. ಸಬ್ ಇನ್ಸ್‌ಪೆಕ್ಟರ್‌ಗಳ ನೇಮಕಾತಿಯಲ್ಲಿ ಭ್ರಷ್ಟಾಚಾರ, ಅಕ್ರಮ ನಡೆದಿದೆ. ಗುತ್ತಿಗೆದಾರರ ಸಂಘವು ಕಮಿಷನ್ ವಿಚಾರವಾಗಿ ಪ್ರಧಾನಿಗೆ ಪತ್ರ ಬರೆದಿದ್ದರೂ ಅವರು ಮೌನ ವಹಿಸಿದ್ದಾರೆ. ಇದರ ಅರ್ಥ ನಿಜಕ್ಕೂ ಭ್ರಷ್ಟಾಚಾರ ನಡೆದಿದೆ ಎಂಬುವುದರ ತಪ್ಪೊಪ್ಪಿಗೆ'' ಎಂದು ಟೀಕಾ ಪ್ರಹಾರ ನಡೆಸಿದರು.
ಇದನ್ನೂ ಓದಿ:ಯಾರು ಬೇಕಾದ್ರೂ ಸಿಎಂ ಆಗಿ, ನನಗೆ ಬೇಕಿರುವುದು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಅಷ್ಟೇ: ಖರ್ಗೆ