ಕೋಲಾರ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಸ್ಥಿತಿ ಇದ್ದಿದ್ದರೆ, ಸಿದ್ದರಾಮಯ್ಯ ತಿರುಕನ ತರಹ ಊರೂರು ಅಲೆಯುತ್ತಿರಲಿಲ್ಲ. ಭಿಕ್ಷಾಂದೇಹಿ ಭಿಕ್ಷಾಂದೇಹಿ ಎಂದು ಕೇಳಿಕೊಳ್ಳುತ್ತಿರಲಿಲ್ಲ ಎಂದು ಸಚಿವ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ. ಕೋಲಾರದ ಶ್ರೀನಿವಾಸಪುರ ಪಟ್ಟಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿವರು, ಮೈಸೂರು ಆಯ್ತು ಬಾದಾಮಿ ಆಯ್ತು ಈಗ ಸಿದ್ದರಾಮಯ್ಯ ಕೋಲಾರಕ್ಕೆ ಬಂದಿದ್ದಾರೆ. ಈ ಬಾರಿ ಕೋಲಾರದಲ್ಲಿ ಸೋತರೆ ಮತ್ತೆ ಎಲ್ಲಿ ಹೋಗ್ತಾರೋ ಗೊತ್ತಿಲ್ಲ. ಇನ್ನು ಕೋಲಾರದಲ್ಲಿ ಸಿದ್ದರಾಮಯ್ಯ ಅವರು ಹೆಸರಿಗಷ್ಟೇ ಡೂಪ್ಲಿಕೇಟ್ ಮನೆ ಮಾಡುತ್ತಿದ್ದಾರೆ. ಅದು ಸುಮ್ನೆ ಹೆಸರಿಗಷ್ಟೇ, ಮನೆ ಎಂದು ಬೋರ್ಡ್ ಇರುತ್ತದೆಯೇ ಹೊರತು ಅವರು ಇರೋದಿಲ್ಲ. ಸಿದ್ದರಾಮಯ್ಯ ಕೋಲಾರದ ಕಡೆ ತಿರುಗಿಯೂ ನೋಡುವುದಿಲ್ಲ, ಅವರಿಗೆ ಬಿಸಿಲು ಕಂಡರೆ ಆಗೋಲ್ಲ, ಬಿಸಿಲಲ್ಲಿ ಓಡಾಡುವುದಿಲ್ಲ ಎಂದು ಆರೋಪಿಸಿದರು.
ಕಾಂಗ್ರೆಸ್ಗೆ ದೇಶದಲ್ಲಿ ಉಳಿಗಾಲವಿಲ್ಲ ಎಂದ ಕಂದಾಯ ಸಚಿವರು: ಕಾಂಗ್ರೆಸ್ಗೆ ದೇಶದಲ್ಲೇ ಉಳಿಗಾಲವಿಲ್ಲ. ರಾಜ್ಯದಲ್ಲಿಯೂ ಇರೋದಿಲ್ಲ. ಎಲ್ಲ ರಾಜ್ಯಗಳಲ್ಲೂ ಕಾಂಗ್ರೆಸ್ ನೆಲಕಚ್ಚುತ್ತಿದೆ. ಕರಪ್ಷನ್ ಎಂದರೆ ಅದು ಕಾಂಗ್ರೆಸ್ ಎಂದ ಅವರು, ಹೆಂಡ ಮತ್ತು ಹಣ ಮೊದಲು ಹಂಚಿದವರೇ ಕಾಂಗ್ರೆಸ್ ಪಕ್ಷದವರು. ಕಾಂಗ್ರೆಸ್ ಸರ್ಕಾರ ಇದ್ದ ವೇಳೆ ಹಲವಾರು ಹಗರಣಗಳು ಬಯಲಿಗೆ ಬಂದವು. ಮೋದಿ ಸರ್ಕಾರದಲ್ಲಿ ಯಾವುದೂ ಹಗರಣಗಳು ಇಲ್ಲ. ಶುದ್ಧ ಆಡಳಿತವನ್ನು ಮೋದಿ ನೀಡುತ್ತಿದ್ದಾರೆ. ಆದರೆ ಕಾಂಗ್ರೆಸ್ನ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ವಿರುದ್ಧ ಹಗರಣದ ಆರೋಪಗಳಿವೆ. ಹೀಗಾಗಿ ಇವತ್ತಿಗೂ ಅವರು ಬೇಲ್ ಮೇಲೆ ಹೊರಗಿದ್ದಾರೆ ಎಂದು ಆರ್ ಅಶೋಕ್ ಟೀಕಾ ಪ್ರಹಾರ ನಡೆಸಿದರು.
ಪೈಟರ್ ರವಿ ಸ್ವಾಗತಿಸಿದ್ದು ಪರಿಶೀಲನೆ:ಇನ್ನೂ ಮಂಡ್ಯದ ಮೋದಿ ಅವರ ಕಾರ್ಯಕ್ರಮದಲ್ಲಿ ಪೈಟರ್ ರವಿ ಸ್ವಾಗತ ಕೋರಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಸ್ವಾಗತ ಪಟ್ಟಿಯಲ್ಲಿ ಹೇಗೆ ಬಂದ ಎಂದು ವಿಚಾರಣೆ ಮಾಡಲಾಗುತ್ತಿದೆ. ಕಮಿಟಿ ಉಸ್ತುವಾರಿ ಶೋಭಾ ಕರಂದ್ಲಾಜೆ ಅವರಿಂದ ಪರಿಶೀಲನೆ ನಡೆಸಲಾಗುತ್ತಿದೆ. ಹೀಗಾಗಿ ಯಾರು ಅವರ ಹೆಸರನ್ನು ಸೇರಿಸಿದ್ದಾರೋ, ಅವರ ವಿರುದ್ಧ ಪಾರ್ಟಿ ಶಿಸ್ತಿನ ಕ್ರಮ ತೆಗೆದುಕೊಳ್ಳೂತ್ತದೆ ಎಂದು ತಿಳಿಸಿದರು.