ಕೋಲಾರ:ಲಾಭದ ಆಸೆಗೆ ಹಣವನ್ನು ಹೂಡಿಕೆ ಮಾಡಿ ಹಣ ಕಳೆದುಕೊಂಡಿರುವ ನೂರಾರು ಮಹಿಳೆಯರು ಹಾಗೂ ವೃದ್ಧರು ನಗರದ ಕೆಜಿಎಫ್ ಎಸ್ಪಿ ಕಚೇರಿ ಎದುರು ದೂರಿನ ಪ್ರತಿ ಮತ್ತು ದಾಖಲೆಗಳನ್ನು ಹಿಡಿದುಕೊಂಡು ನಿಂತಿದ್ದಾರೆ.
ಹೌದು, ನಾವು ಹೇಳ ಹೊರಟಿರೋದು ಐಎಂಎ ಮಾದರಿಯಲ್ಲೇ ಮೋಸ ಮಾಡಿದ್ದಾರೆ ಎನ್ನಲಾದ ಬಂಗಾರಪೇಟೆ ಷಣ್ಮುಗಂ ಫೈನಾನ್ಸ್ ಆ್ಯಂಡ ಚಿಟ್ ಫಂಡ್ ಕಂಪನಿಯ ಸ್ಟೋರಿ. ಯಾವುದೇ ಆಧಾರವಿಲ್ಲದೆ ಬಡ್ಡಿಯ ಆಸೆಗೆ ಲಕ್ಷದಿಂದ ಕೋಟ್ಯಂತರ ರೂ.ಗಳವರೆಗೆ ಹಣವನ್ನ ಹೂಡಿಕೆ ಮಾಡಿ ಇವರೆಲ್ಲಾ ಮೋಸ ಹೋಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇಲ್ಲಿ ಹೂಡಿಕೆ ಮಾಡಿದವರೆಲ್ಲಾ ತಮ್ಮ ನಿವೃತ್ತಿಯ ನಂತರ ಬಂದ ಹಣ, ಇಲ್ಲಾ ಮಕ್ಕಳ ಮದುವೆಗೆಂದು ಕೂಡಿಟ್ಟಿರುವುದು. ಹೀಗೆ ದುಡಿಯಲಾಗದ ಸ್ಥಿತಿಯಲ್ಲೂ ಇದ್ದ ಜಮೀನನ್ನು ಮಾರಿ ಬಂದ ಹಣವನ್ನು ಇಲ್ಲಿ ಹೂಡಿಕೆ ಮಾಡಿದ್ದರಂತೆ. ಈ ಮೂಲಕ ಬರುವ ಬಡ್ಡಿಹಣದಲ್ಲಿ ಜೀವನ ಮಾಡಲು ಹೋದವರೇ ಇಂದು ಕೈ ಕೈ ಹಿಸುಕಿಕೊಳ್ಳುವಂತಾಗಿದೆ.