ಕೋಲಾರ:ಕೋಲಾರ ಜಿಲ್ಲೆಯಲ್ಲಿ ದನಕರುಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಳ್ಳುವ ಮೂಲಕ ರೈತರಲ್ಲಿ ಆತಂಕವನ್ನುಂಟು ಮಾಡಿದೆ.
ಚರ್ಮಗಂಟು ರೋಗ ಒಂದು ವೈರಸ್ ಆಗಿದೆ. ಈ ರೋಗ ಹಸುಗಳಲ್ಲಿ ಕಾಣಿಸಿಕೊಂಡ ನಂತರ, ಹಸುಗಳಲ್ಲಿ ಹಾಲು ಉತ್ಪಾದನೆ ಕಡಿಮೆಯಾಗುತ್ತದೆ, ಜೊತೆಗೆ ಹಸುಗಳು ಆಹಾರ, ನೀರನ್ನು ಬಿಟ್ಟು ಏಕಾಏಕಿ ಬಡಕಲಾಗುತ್ತವೆ. ಕೊನೆಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ ರೋಗದ ವೈರಾಣು ಬೇರೆ ಹಸುಗಳಿಗೆ ಬೇಗನೆ ಹರಡುತ್ತದೆ.
ಜಾನುವಾರುಗಳಲ್ಲಿ ಚರ್ಮಗಂಟು ರೋಗ ಇನ್ನು ಕೋಲಾರ ಜಿಲ್ಲೆಯಲ್ಲಿ ಸರಿ ಸುಮಾರು 1,86,285 ಹಸುಗಳು ಸೇರಿದಂತೆ, 2,15,533 ಜಾನುವಾರುಗಳಿವೆ. ಈ ರೋಗವು ಹೆಚ್ಚಾಗಿ ಜಿಲ್ಲೆಯ ಗಡಿ ಗ್ರಾಮಗಳಲ್ಲಿ ಅದರಲ್ಲೂ ಶ್ರೀನಿವಾಸಪುರ ತಾಲೂಕು, ಮತ್ತು ಕೆಜಿಎಫ್ ತಾಲೂಕುಗಳಲ್ಲಿ ಹೆಚ್ಚಾಗಿ ಕಂಡು ಬಂದಿದೆ.
ಜಿಲ್ಲೆಯಲ್ಲಿ ಒಟ್ಟು ಈವರೆಗೆ 34 ಹಸುಗಳಲ್ಲಿ ಈ ರೋಗ ಕಂಡು ಬಂದಿರುವ ಬಗ್ಗೆ ಪಶುಸಂಗೋಪನಾ ಇಲಾಖೆಗೆ ಮಾಹಿತಿ ಸಿಕ್ಕಿದ್ದು, ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡುವ ಮೂಲಕ ರೋಗ ನಿಯಂತ್ರಣಕ್ಕೆ ತರಲು ಪ್ರಯತ್ನ ನಡೆಸಲಾಗುತ್ತಿದೆ. ಜೊತೆಗೆ ರೋಗ ಕಂಡು ಬಂದ ಸುತ್ತಮುತ್ತಲ 5 ಕಿಲೋಮೀಟರ್ ವ್ಯಾಪ್ತಿಯ ಹಸುಗಳಿಗೆ ಹಾಗೂ ಜಾನುವಾರುಗಳಿಗೆ ಲಸಿಕೆ ಹಾಕುವ ಕೆಲಸವೂ ಆರಂಭವಾಗಿದೆ.
ಸದ್ಯ ರೋಗ ಹರಡದಂತೆ ಕ್ರಮ ವಹಿಸಲು ರೈತರಿಗೆ ಮಾರ್ಗದರ್ಶನ ನೀಡಲಾಗುತ್ತಿದ್ದು, ರೋಗ ಬಂದ ಹಸುಗಳನ್ನು ಪ್ರತ್ಯೇಕವಾಗಿ ಚಿಕಿತ್ಸೆ ನೀಡುವುದರ ಜೊತೆಗೆ ಸೊಳ್ಳೆ, ನೊಣಗಳು ಕಚ್ಚಿದಲ್ಲಿ ಸೊಳ್ಳೆ ಪರದೆ ಹಾಕುವುದು, ಶುಚಿತ್ವ ಕಾಪಾಡುವ ಮೂಲಕ ರೋಗ ನಿಯಂತ್ರಣ ಮಾಡಬಹುದು ಎಂದು ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.