ಕೋಲಾರ/ಬೆಂಗಳೂರು: ಮದುವೆಯಾಗಿ ಸುಖ ಜೀವನ ಕಾಣಬೇಕಿದ್ದ ಯುವತಿಯೊಬ್ಬಳ ಜೀವನದಲ್ಲಿ ವಿಧಿ ಆಟ ಆಡಿದೆ. ಆ ವಧುವಿನ ಸುಂದರ ಜೀವನವನ್ನು ಮದುವೆ ಆರತಕ್ಷತೆ ವೇಳೆಯೇ ವಿಧಿ ಕಸಿದುಕೊಂಡಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪೋಷಕರು ವಧು ಚೈತ್ರಾ ಆರತಕ್ಷತೆಯನ್ನು ಭರ್ಜರಿಯಾಗಿಯೇ ಆಯೋಜಿಸಿದ್ದರು. ಎಲ್ಲರೂ ನಗುನಗುತ್ತಲೇ ಕಾಲ ಕಳೆಯುತ್ತಿದ್ದರು. ನೂತನ ದಂಪತಿಗೆ ಸಂಬಂಧಿಗಳು ಆಶೀರ್ವಾದ ನೀಡಿ ಪೋಟೋಗೆ ಪೋಸ್ ಕೊಡುತ್ತಿದ್ದರು. ಆದರೆ ಒಂದೇ ಕ್ಷಣ ಎಲ್ಲವೂ ನುಚ್ಚು ನೂರಾಯ್ತು.
ಏನಾಯ್ತೋ ಏನೋ ತಿಳಿಯಲಿಲ್ಲ. ವಧು ಚೈತ್ರ ಹಠಾತ್ ಆಗಿ ಆರತಕ್ಷತೆ ವೇಳೆಯೇ ಕುಸಿದು ಬಿದ್ದರು. ಕೂಡಲೇ ಅವರನ್ನು ನಿಮಾನ್ಸ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಅಲ್ಲಿ ವೈದ್ಯರು ಆಕೆಯ ಪೋಷಕರಿಗೆ ಶಾಕ್ ನೀಡಿದರು.
ಓದಿ:ಚೀನಾದಿಂದ ಭಾರತಕ್ಕೆ ಜಿಯೋ - ಪೊಲಿಟಿಕಲ್ ಸಮಸ್ಯೆ ತೀವ್ರ: ಶ್ವೇತಭವನದ ಇಂಡೋ-ಪೆಸಿಫಿಕ್ ಸ್ಟ್ರಾಟೆಜಿಕ್ ವರದಿ
26 ವರ್ಷದ ಚೈತ್ರಾಳ ಬ್ರೈನ್ ಡೆಡ್ ಆಗಿದೆ. ಅವಳು ಬದುಕುಳಿಯುವುದು ಅಸಾಧ್ಯ ಎಂದು ವೈದ್ಯರು ಆಕೆಯ ಪೋಷಕರಿಗೆ ತಿಳಿಸಿದ್ದಾರೆ. ಈ ಸುದ್ದಿ ತಿಳಿದ ಪೋಷಕರ ರೋದನೆ ಮುಗಿಲು ಮುಟ್ಟಿತು. ಇಂತಹ ಹೃದಯವಿದ್ರಾವಕ ದುರಂತದ ನಡುವೆಯೂ ಆಕೆಯ ಪೋಷಕರು ತಮ್ಮ ಮುದ್ದು ಮಗಳ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದರು.
ಇನ್ನು ಈ ಸುದ್ದಿ ಆರೋಗ್ಯ ಸಚಿವ ಸುಧಾಕರ್ಗೆ ತಿಳಿದಿದ್ದು, ಈ ಬಗ್ಗೆ ತಮ್ಮ ಟ್ಟಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 26 ವರ್ಷಗಳ ಚೈತ್ರಾಗೆ ಇದು ದೊಡ್ಡ ದಿನವಾಗಿತ್ತು. ಆದರೆ ವಿಧಿಯು ಇತರ ಯೋಜನೆಗಳನ್ನು ಹೊಂದಿತ್ತು. ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಮದುವೆಯ ಆರತಕ್ಷತೆ ವೇಳೆ ಚೈತ್ರಾ ಕುಸಿದು ಬಿದ್ದರು.
ನಂತರ ನಿಮ್ಹಾನ್ಸ್‌ನಲ್ಲಿ ಆಕೆಯ ಬ್ರೈನ್ ಡೆಡ್ ಆಗಿದೆ ಎಂದು ವೈದ್ಯರು ಘೋಷಿಸಿದರು. ಹೃದಯವಿದ್ರಾವಕ ದುರಂತದ ನಡುವೆಯೂ ಆಕೆಯ ಪೋಷಕರು ಮಗಳ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ. ಇದೊಂದು ಉದಾತ್ತ ಕಾರ್ಯವಾಗಿದ್ದು, ಎಲ್ಲರಿಗೂ ಮಾದರಿಯಾಗಬೇಕು. ಚೈತ್ರಾ ಅನೇಕ ಜೀವಗಳನ್ನು ಉಳಿಸುತ್ತಿದ್ದಾರೆ. ನಿಮ್ಹಾನ್ಸ್‌ನಲ್ಲಿ ಇದು ಮೊದಲ ಅಂಗಾಂಗ ಹಿಂಪಡೆಯುವಿಕೆಯಾಗಿದೆ ಎಂದು ಸುಧಾಕರ್ ಟ್ವೀಟ್ ಮಾಡಿದ್ದಾರೆ.