ಕೋಲಾರ:ವಿಧಾನ ಪರಿಷತ್ ಚುನಾವಣಾ ಕಣ ರಂಗೇರಿದೆ. ಕೋಲಾರ ಹಾಗು ಚಿಕ್ಕಬಳ್ಳಾಪುರ ಜಿಲ್ಲೆಯ ಬಿಜೆಪಿ ಮುಖಂಡರು ಲೋಕಲ್ ಆಪರೇಷನ್ ಕಮಲ ಮಾಡಲು ಆರಂಭಿಸಿದ್ದಾರೆ. ಸದ್ಯ ಪ್ರಮುಖ ಹಾಗು ಪ್ರಭಾವಿ ಮುಖಂಡರುಗಳಿಗೆ ಗಾಳ ಹಾಕಿರುವ ನಾಯಕರು, ಒಬ್ಬೊಬ್ಬರನ್ನೇ ತಮ್ಮತ್ತ ಸೆಳೆಯಲು ಶುರು ಮಾಡಿದ್ದಾರೆ.
ವರ್ತೂರು ಪ್ರಕಾಶ್ ನಿವಾಸದಲ್ಲಿ ಬಿಜೆಪಿ ಮುಖಂಡರಿಗೆ ಭರ್ಜರಿ ಬಾಡೂಟ ರಾಜ್ಯ ರಾಜಕಾರಣಕ್ಕೆ ಸೀಮಿತವಾಗಿದ್ದ 'ಆಪರೇಷನ್ ಕಮಲ' 10 ವರ್ಷಗಳ ನಂತರ ಪರಿಷತ್ ಫೈಟ್ ಮೂಲಕ ಮತ್ತೆ ಜಿಲ್ಲೆಗೆ ಕಾಲಿರಿಸಿದೆ. 2011ರಲ್ಲಿ ಅಂದಿನ ಬಂಗಾರಪೇಟೆ ಕಾಂಗ್ರೆಸ್ ಶಾಸಕರಾಗಿದ್ದ ಎಂ.ನಾರಾಯಣಸ್ವಾಮಿ ಆಪರೇಷನ್ ಕಮಲಕ್ಕೊಳಗಾಗಿ ಉಪಚುನಾವಣೆ ಕೂಡ ನಡೆದಿತ್ತು. ಅದರಂತೆ ಮತ್ತೆ ವಿಧಾನ ಪರಿಷತ್ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿರುವ ಕಾಂಗ್ರೆಸ್ ಹಾಗು ಬಿಜೆಪಿ ಹಲವು ತಂತ್ರ- ಪ್ರತಿತಂತ್ರಗಳನ್ನು ರೂಪಿಸಿವೆ.
ಅತೃಪ್ತರಿಗೆ ಗಾಳ:
ಕಾಂಗ್ರೆಸ್ನಲ್ಲಿರುವ ಬಂಡಾಯವನ್ನು ಬಂಡವಾಳ ಮಾಡಿಕೊಂಡಿರುವ ಬಿಜೆಪಿ ಮುಖಂಡರು, ಕಾಂಗ್ರೆಸ್ ಪಕ್ಷದಲ್ಲಿನ ಅತೃಪ್ತರು, ಅಸಮಾಧಾನಿತರಿಗೆ ಗಾಳ ಹಾಕುತ್ತಿದೆ. ಸದ್ಯ ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರರೆಡ್ಡಿ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ ಸಿಎಂ ಬೊಮ್ಮಾಯಿ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಅದರಂತೆ, ಕೋಲಾರದ ಮಾಜಿ ಸಚಿವ ವರ್ತೂರು ಪ್ರಕಾಶ್ ಸುತ್ತ ಗಮನ ಕೇಂದ್ರೀಕರಿಸಿರುವ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯ ನಾಯಕರು ಪಕ್ಷಕ್ಕೆ ಸೇರಿಸಿಕೊಳ್ಳಲು ಮುಂದಾಗಿದ್ದಾರೆ. ಈ ಸಲುವಾಗಿ ಸಚಿವ ಡಾ.ಕೆ ಸುಧಾಕರ್, ಮುನಿರತ್ನ, ಕೋಲಾರ ಸಂಸದ ಮುನಿಸ್ವಾಮಿ ಸೇರಿದಂತೆ ಹಲವು ಮುಖಂಡರು ನಿನ್ನೆ (ಶನಿವಾರ) ವರ್ತೂರು ಪ್ರಕಾಶ್ ಅವರ ಕೋಗಿಲಹಳ್ಳಿ ನಿವಾಸದಲ್ಲಿ ಸಭೆ ನಡೆಸಿ, ಭರ್ಜರಿ ಬಾಡೂಟ ಮಾಡಿ ವರ್ತೂರು ಪ್ರಕಾಶ್ ಜತೆಗೆ ಅರ್ಧ ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ. ಆ ಬಳಿಕ ಪಕ್ಷಕ್ಕೆ ಬರುವಂತೆ ಮನವಿ ಮಾಡಿದ್ದಾರೆ. ಆದ್ರೆ ಪಟ್ಟುಬಿಡದ ಪ್ರಕಾಶ್ ತನ್ನ ನಿಲುವನ್ನು ಇಂದು ಸಂಜೆ ಪ್ರಕಟಿಸುವುದಾಗಿ ಹೇಳಿದ್ದಾರೆ.
ಈ ವೇಳೆ ಮಾತನಾಡಿದ ಸಚಿವ ಸುಧಾಕರ್ ಹಾಗು ಮುನಿರತ್ನ, ಪಕ್ಷ ಸಂಘಟನೆ ಹಾಗು ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವ ನಿಟ್ಟಿನಲ್ಲಿ ಹೋರಾಟ ಮಾಡುತ್ತಿದ್ದೇವೆ. ನಮ್ಮ ಅಭ್ಯರ್ಥಿ ಗೆಲ್ಲಲಿದ್ದಾರೆ. ಅದಕ್ಕಾಗಿ ಜಿಲ್ಲೆಯ ಹಲವು ಕಾಂಗ್ರೆಸ್ ಮುಖಂಡರು ತಮ್ಮ ಪಕ್ಷಕ್ಕೆ ಸೆಳೆಯುವುದಾಗಿ ಹೇಳಿದರು.
ಪಕ್ಷದ ಏಳಿಗೆ ಹಾಗು ಸರ್ಕಾರಕ್ಕೆ ಈ ಚುನಾವಣೆ ಪ್ರತಿಷ್ಠೆಯಾಗಿದೆ. ಅವಳಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಒಳಿತಾಗುವುದಾದರೆ ಮತ್ತಷ್ಟು ಆಪರೇಷನ್ ಕಮಲ ಮಾಡುವುದಾಗಿ ಆರೋಗ್ಯ ಸಚಿವ ಸುಧಾಕರ್ ಹೇಳಿದರು. ಅಲ್ಲದೇ ಜಿಲ್ಲೆಯಲ್ಲಿ ಮತ್ತಷ್ಟು ನಾಯಕರು, ಮುಖಂಡರು ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಆದಷ್ಟು ಶೀಘ್ರ ಎಲ್ಲರನ್ನೂ ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ:ಬೆಳಗಾವಿ: ಕೇರಳ-ಮಹಾರಾಷ್ಟ್ರದಿಂದ ಬಂದಿರುವ 200 ವಿದ್ಯಾರ್ಥಿಗಳ ಸ್ವ್ಯಾಬ್ ಸಂಗ್ರಹ