ಕರ್ನಾಟಕ

karnataka

ETV Bharat / state

ಟಿಕೆಟ್​ಗಾಗಿ ಕೆಜಿಎಫ್​ನಲ್ಲಿ ಬಿಜೆಪಿ ಹೈಡ್ರಾಮಾ; ಕಾಂಗ್ರೆಸ್​ನಿಂದ ಭರ್ಜರಿ ಮತ ಪ್ರಚಾರ

ಕೆಜಿಎಫ್​ನಲ್ಲಿ ಟಿಕೆಟ್​ಗಾಗಿ ಬಿಜೆಪಿ ಆಕಾಂಕ್ಷಿಗಳಿಂದ ಮುಸುಕಿನ ಗುದ್ದಾಟ ನಡೆಯುತ್ತಿದೆ. ಇದನ್ನೇ ಲಾಭ ಮಾಡಿಕೊಂಡಿರುವ ಕಾಂಗ್ರೆಸ್ ಭರ್ಜರಿ ಪ್ರಚಾರದಲ್ಲಿ ತೊಡಗಿದೆ.

ಟಿಕೆಟ್​ಗಾಗಿ ಕೆಜಿಎಫ್​ನಲ್ಲಿ ಬಿಜೆಪಿ ಹೈಡ್ರಾಮಾ
ಟಿಕೆಟ್​ಗಾಗಿ ಕೆಜಿಎಫ್​ನಲ್ಲಿ ಬಿಜೆಪಿ ಹೈಡ್ರಾಮಾ

By

Published : Apr 7, 2023, 8:16 PM IST

ಮೋಹನ್ ಕೃಷ್ಣ ಬೆಂಬಲಿಗ ಶ್ರೀನಾಥ್​ ಅವರು ಮಾತನಾಡಿದರು

ಕೋಲಾರ : ಬಿಜೆಪಿ ಯಾರೂ ನಿರೀಕ್ಷೆ ಮಾಡದ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತದೆ ಅನ್ನೋ ಮಾತುಗಳು ಕೇಳಿ ಬರುತ್ತಿತ್ತು. ಅದಕ್ಕೆ ಪೂರಕವೆಂಬಂತೆ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ತಮ್ಮ ಶಿಷ್ಯನನ್ನು ಅಚ್ಚರಿಯ ಅಭ್ಯರ್ಥಿಯನ್ನಾಗಿ ಕೆಜಿಎಫ್​ ಕ್ಷೇತ್ರಕ್ಕೆ ಪರಿಚಯಿಸಿದ ಬೆನ್ನಲ್ಲೇ ಟಿಕೆಟ್​ಗಾಗಿ ಕೆಜಿಎಫ್​​ನಲ್ಲಿ ಹೋರಾಟ ಆರಂಭವಾಗಿದೆ.

ಕೆಜಿಎಫ್​ ಬಿಜೆಪಿಯಲ್ಲಿ ಟಿಕೆಟ್​ಗಾಗಿ ಆಕಾಂಕ್ಷಿಗಳ ಹೈಡ್ರಾಮ ನಿಂತಿಲ್ಲ. ಈವರೆಗೆ ಟಿಕೆಟ್​ಗಾಗಿ ಮಾಜಿ ಶಾಸಕ ವೈ.ಸಂಪಂಗಿ ಹಾಗೂ ಮೋಹನ್​ ಕೃಷ್ಣ ನಡುವೆ ಫೈಟ್​ ನಡೆಯುತ್ತಿತ್ತು. ಇದೀಗ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ತಮ್ಮ ಶಿಷ್ಯ ಹಾಗೂ ಬೆಂಗಳೂರಿನ ಮಾಜಿ ಕಾರ್ಪೋರೇಟರ್​ ವೇಲುನಾಯ್ಕರ್​ ಎಂಬುವರನ್ನು ಟಿಕೆಟ್​ ಆಕಾಂಕ್ಷಿಯನ್ನಾಗಿ ತಂದು ಬಿಟ್ಟಿದ್ದಾರೆ.

ಗೋ ಬ್ಯಾಕ್​ ವೇಲುನಾಯ್ಕರ್ ಪೋಸ್ಟರ್​: ಈ ಬೆಳವಣಿಗೆಯಿಂದಾಗಿ ಕೆಜಿಎಫ್​ ಟಿಕೆಟ್​ ಆಕಾಂಕ್ಷಿ ಮೋಹನ್​ ಕೃಷ್ಣ ಬೆಂಬಲಿಗರು ಗೋ ಬ್ಯಾಕ್​ ವೇಲುನಾಯ್ಕರ್​ ಅನ್ನೋ ಪೋಸ್ಟರ್​ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಇದರ ಬೆನ್ನಲ್ಲೇ ಇಂದು ಸಾವಿರಾರು ಮೋಹನ್​ ಕೃಷ್ಣ ಬೆಂಬಲಿಗರು ಕೆಜಿಎಫ್​ನಲ್ಲಿ ಮಣ್ಣಿನ ಮಗ ಸ್ಥಳೀಯ ಅಭ್ಯರ್ಥಿಗೆ ಬಿಜೆಪಿ ಟಿಕೆಟ್​ ನೀಡಬೇಕು ಎಂದು ಆಗ್ರಹಿಸಿ ಕೆಜಿಎಫ್​ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರು.

ಬಂಡಾಯ ಸ್ಪರ್ಧೆ ಎಚ್ಚರಿಕೆ:ಜಿಲ್ಲಾ ಉಸ್ತುವಾರಿ ಸಚಿವರು ಏಕಾಏಕಿ ಈ ರೀತಿ ಮಾಡಿದ್ದು ಸರಿಯಲ್ಲ. ಹಲವು ವರ್ಷಗಳಿಂದ ಇಲ್ಲಿ ಸಮಾಜ ಸೇವೆ ಮಾಡಿಕೊಂಡು ಬಂದು ಪಕ್ಷ ಕಟ್ಟಿರುವವರನ್ನು ಬಿಟ್ಟು ಹೊರಗಿನವರನ್ನು ಕರೆತಂದು ಅಭ್ಯರ್ಥಿಯನ್ನಾಗಿ ಮಾಡುವ ಹುನ್ನಾರ ನಡೆದಿದೆ. ಮೋಹನ್​ ಕೃಷ್ಣ ಅವರಿಗೆ ಕೆಜಿಎಫ್​ನಲ್ಲಿ ಪ್ರಾಣ ಬೇಕಾದ್ರೂ ಕೊಡುವಂತ ಬೆಂಬಲಿಗರಿದ್ದಾರೆ. ಅಂಥ ನಾಯಕನಿಗೆ ಟಿಕೆಟ್​ ನೀಡಬೇಕು. ಒಂದು ವೇಳೆ ಪಕ್ಷ ಮೋಹನ್​ ಕೃಷ್ಣ ಅವರಿಗೆ ಟಿಕೆಟ್​ ನೀಡದೆ ಹೋದರೆ ಬಂಡಾಯವಾಗಿ ಸ್ಪರ್ಧೆ ಮಾಡುವ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಜಿಎಫ್​ ಬಿಜೆಪಿ ನಗರ ಘಟಕದ ಅಧ್ಯಕ್ಷ, ಪಕ್ಷ ಇನ್ನೂ ಯಾರನ್ನೂ ಅಂತಿಮ ಮಾಡಿಲ್ಲ. ಹಾಗಾಗಿ ಇಲ್ಲಿನ ಕಾರ್ಯಕರ್ತರ ಬೇಡಿಕೆಯನ್ನು ಪಕ್ಷದ ವರಿಷ್ಠರಿಗೆ ತಿಳಿಸುವುದಾಗಿ ಹೇಳಿದ್ರು.

ಕಾಂಗ್ರೆಸ್​ ಶಾಸಕಿ ರೂಪಕಲಾ ಭರ್ಜರಿ ಪ್ರಚಾರ: ಕೆಜಿಎಫ್​ನಲ್ಲಿ ಮಾಜಿ ಶಾಸಕ ವೈ.ಸಂಪಂಗಿ ಕೂಡಾ ಪ್ರಬಲ ಟಿಕೆಟ್​ ಆಕಾಂಕ್ಷಿಯಾಗಿದ್ದರು. ಮೊನ್ನೆ ಮೊನ್ನೆವರೆಗೂ ಉಸ್ತುವಾರಿ ಸಚಿವ ಮುನಿರತ್ನ ಅವರು ಸಂಪಂಗಿ ಅವರಿಗೆ ಟಿಕೆಟ್​ ನೀಡುತ್ತದೆ ಎಂದು ಹಲವೆಡೆ ಹೇಳಿಕೊಂಡು ಓಡಾಡುತ್ತಿದ್ದರು. ಈ ನಡುವೆ ವೇಲುನಾಯ್ಕರ್​ ಅನ್ನೋ ಬೆಂಗಳೂರು ಮೂಲದ ಹೊಸ ಅಕಾಂಕ್ಷಿಯನ್ನು ಪರಿಚಯಿಸಿರುವುದು ಕೆಜಿಎಫ್​ ಕ್ಷೇತ್ರದಲ್ಲಿ ಮತ್ತಷ್ಟು ಟಿಕೆಟ್​ ಗೊಂದಲ ಹೆಚ್ಚಾಗುವಂತೆ ಮಾಡಿದೆ. ಬಿಜೆಪಿಯಲ್ಲಿನ ಗೊಂದಲವನ್ನೇ ಲಾಭವನ್ನಾಗಿ ಮಾಡಿಕೊಂಡಿರುವ ಹಾಲಿ ಕಾಂಗ್ರೆಸ್​ ಶಾಸಕಿ ರೂಪಕಲಾ ತಮ್ಮಷ್ಟಕ್ಕೆ ತಾವು ಕ್ಷೇತ್ರದಲ್ಲಿ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ.

ಇದನ್ನೂ ಓದಿ :ಸುದೀಪ್ ಕರ್ನಾಟಕದ ಜನರ ಜೊತೆ ನಿಲ್ಲಬೇಕು, ಪಕ್ಷದ ಪರವಾಗಿ ಅಲ್ಲ: ಪ್ರಿಯಾಂಕ್ ಖರ್ಗೆ

ABOUT THE AUTHOR

...view details