ಕೋಲಾರ: ನಕಲಿ ಕ್ಲಿನಿಕ್ ಮೇಲೆ ಅಧಿಕಾರಿಗಳು ದಾಳಿ ಮಾಡಿ ಸೀಜ್ ಮಾಡಿರುವ ಘಟನೆ ಕೋಲಾರದ ಬಂಗಾರಪೇಟೆಯಲ್ಲಿ ಗುರುವಾರ ನಡೆದಿದೆ. ಬಂಗಾರಪೇಟೆ ತಹಶೀಲ್ದಾರ್ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿಗಳು ಬಂಗಾರಪೇಟೆ ಪಟ್ಟಣದ ಕೆಜಿಎಫ್ ಮುಖ್ಯರಸ್ತೆಯ ದೇಶಿಹಳ್ಳಿಯಲ್ಲಿ ನಕಲಿಯಾಗಿ ನಡೆಸಲಾಗುತ್ತಿದ್ದ ಪ್ರಗತಿ ಕ್ಲಿನಿಕ್ ಜಪ್ತಿ ಮಾಡಿದರು.
ಯಾವುದೇ ಪರವಾನಗಿ ಇಲ್ಲದೆ ಕ್ಲಿನಿಕ್ ನಡೆಸುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಕಳೆದ ಮೂರು ವಾರಗಳಿಂದ ತನಿಖೆ ಮಾಡಲಾಗಿತ್ತು. ಇದೀಗ ಡಾ.ರಜನಿಕಾಂತ್ ಎಂಬವರಿಗೆ ಸೇರಿದ ಈ ನಕಲಿ ಕ್ಲಿನಿಕ್ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗಿದೆ. ಕ್ಲಿನಿಕ್ ನಡೆಸುತ್ತಿರುವ ವ್ಯಕ್ತಿಯ ಬಳಿ ಪರವಾನಗಿ ಇಲ್ಲ. ಇದೇ ವೈದ್ಯರು ಈ ಹಿಂದೆಯೂ ಒಮ್ಮೆ ಕೆಜಿಎಫ್ನಲ್ಲಿ ನಕಲಿ ಕ್ಲಿನಿಕ್ ನಡೆಸುತ್ತಿರುವಾಗ ಸೀಜ್ ಆಗಿ ಇನ್ನು ಮುಂದೆ ಕ್ಲಿನಿಕ್ ತೆರೆಯುವುದಿಲ್ಲ ಎಂದು ಜಿಲ್ಲಾಧಿಕಾರಿಗಳಿಗೆ ಹೇಳಿಕೆ ನೀಡಿದ್ದರು.
ಈ ಘಟನೆಯ ಬಳಿಕ ಇಲ್ಲಿ ಬಂದು ಮತ್ತೊಮ್ಮೆ ಕ್ಲಿನಿಕ್ ಮಾಡುತ್ತಿರುವ ಮಾಹಿತಿ ಸಿಕ್ಕಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ಕ್ಲಿನಿಕ್ ಪರಿಶೀಲಿಸಿದಾಗ ಔಷಧ ಇಟ್ಟುಕೊಂಡು ಚಿಕಿತ್ಸೆ ನೀಡಲಾಗುತ್ತಿತ್ತು. ಹೈಕೋರ್ಟ್ ಆದೇಶದಂತೆ ಪರವಾನಗಿ ಇಲ್ಲದೆ ಕ್ಲಿನಿಕ್ ತೆರೆಯುವಂತಿಲ್ಲ. ನೋಂದಾಯಿತ ವೈದ್ಯರಲ್ಲ. ಕೆಪಿಎಂಇ ನೋಂದಣಿ ಕೂಡ ಇವರ ಬಳಿ ಇರಲಿಲ್ಲ. ನಕಲಿ ಕ್ಲಿನಿಕ್ ತೆರೆಯುವವರ ಬಗ್ಗೆ ಅಂಗಡಿ ಬಾಡಿಗೆಗೆ ಕೊಡುವವರೂ ಎಚ್ಚರವಹಿಸಬೇಕು. ದಾಖಲೆಗಳನ್ನು ಪರಿಶೀಲಿಸಿ ನೋಂದಾಯಿತ ವೈದ್ಯರಿಗೆ ಮಾತ್ರ ಬಾಡಿಗೆಗೆ ಕೊಡಬೇಕು ಎಂದು ಮಾಲೀಕರಿಗೆ ಅಧಿಕಾರಿಗಳ ತಂಡ ಸಲಹೆ ನೀಡಿದೆ.