ಕೊಲೆ ಪ್ರಕರಣ ಖಂಡಿಸಿ ಶ್ರೀನಿವಾಸಪುರ ತಾಲೂಕು ಬಂದ್ ಕೋಲಾರ:ಕಾಂಗ್ರೆಸ್ ಮುಖಂಡ, ದಲಿತ ನಾಯಕ ಶ್ರೀನಿವಾಸ ಕೊಲೆ ಖಂಡಿಸಿ ವಿವಿಧ ದಲಿತ ಹಾಗೂ ಪ್ರಗತಿಪರ ಸಂಘಟನೆಗಳು ಶ್ರೀನಿವಾಸಪುರ ತಾಲೂಕು ಬಂದ್‌ಗೆ ಕರೆ ನೀಡಿವೆ. ಶ್ರೀನಿವಾಸಪುರದಲ್ಲಿ ಕಾಂಗ್ರೆಸ್ ಮುಖಂಡನ ಕೊಲೆ ಪ್ರಕರಣದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಈ ಕೇಸ್ ಅನ್ನು ಸಿಬಿಐಗೆ ವಹಿಸುವಂತೆ ವಿವಿಧ ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಒತ್ತಾಯಿಸಿದರು. ಬೆಳಂ ಬೆಳಗ್ಗೆ ರಸ್ತೆಗಿಳಿದ ಸಂಘಟನೆಗಳ ಮುಖಂಡರು ಶ್ರೀನಿವಾಸಪುರ ಪಟ್ಟಣದಲ್ಲಿ ಬೈಕ್ ರ‍್ಯಾಲಿ ಮೂಲಕ ಬಂದ್ ಬೆಂಬಲಿಸುವಂತೆ ಮನವಿ ಮಾಡಿದರು.
ಬಂದ್ ಹಿನ್ನೆಲೆ ರಸ್ತೆಗಳೆಲ್ಲಾ ಖಾಲಿ ಖಾಲಿಯಾಗಿದ್ದವು. ವ್ಯಾಪಾರಸ್ಥರು ತಮ್ಮ ಅಂಗಡಿ, ಮುಂಗಟ್ಟುಗಳು ಬಂದ್ ಮಾಡಿ ಬೆಂಬಲ ವ್ಯಕ್ತಪಡಿಸಿದರು. ಸಂಚಾರ ಸಂಪೂರ್ಣ ಬಂದ್ ಆಗಿದೆ. ಹಲವು ಸಂಘಟನೆ ಮುಖಂಡರು, ಪಟ್ಟಣದಲ್ಲಿ ಮೃತ ಕೌನ್ಸಲರ್ ಶ್ರೀನಿವಾಸ್ ಕಟೌಟ್ ಅನ್ನು ಹೊತ್ತು ಮೆರವಣಿಗೆ ಮಾಡಿದರು. ಶ್ರೀನಿವಾಸ್ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಡಿವೈಎಎಸ್‌ಪಿ ನಂದ ಕುಮಾರ್ ನೇತೃತ್ವದಲ್ಲಿ ಶ್ರೀನಿವಾಸಪುರದಲ್ಲಿ ಪೊಲೀಸ್ ಸರ್ಪಗಾವಲನ್ನು ಹಾಕಲಾಗಿದೆ.
ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆ ಪ್ರಕರಣದ ಮಾಹಿತಿ:ದಲಿತ ಮತ್ತು ಕಾಂಗ್ರೆಸ್ನ ಸ್ಥಳೀಯ ಪ್ರಭಾವಿ ಮುಖಂಡ ಶ್ರೀನಿವಾಸ್ ಅವರನ್ನು ಅಪರಿಚಿತರ ಗುಂಪೊಂದು ಬರ್ಬರವಾಗಿ ಕೊಲೆ ಮಾಡಿದ್ದ ಘಟನೆ ಅಕ್ಟೋಬರ್ 23ರಂದು ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಹೊಗಳಗೆರೆ ರಸ್ತೆಯಲ್ಲಿರುವ ತೋಟದ ಸಮೀಪ ನಡೆದಿತ್ತು.
ಪ್ರತ್ಯಕ್ಷದರ್ಶಿಯಿಂದ ಘಟನೆಯ ವಿವರ:ಪ್ರತ್ಯಕ್ಷದರ್ಶಿ ಅಮರ್ ಕೊಲೆ ಬಗ್ಗೆ ಮಾಹಿತಿ ನೀಡಿದ್ದರು. ಲಾಂಗು ಮತ್ತು ಮಚ್ಚಿನಿಂದ ಶ್ರೀನಿವಾಸ್‌ರನ್ನು ಕೊಚ್ಚಿ ಹತ್ಯೆ ಮಾಡಿದ್ದರು. ಅಲ್ಲೇ ಇದ್ದ ಶ್ರೀನಿವಾಸ್ ಅವರ ಸಹಾಯಕ ಅಮರ್ ಮತ್ತು ಕೃಷ್ಣಪ್ಪ ಎಂಬವರ ಮೇಲೂ ದುಷ್ಕರ್ಮಿಗಳು ಹಲ್ಲೆಗೆ ಮುಂದಾಗಿದ್ದರು, ಇಬ್ಬರು ತಪ್ಪಿಸಿಕೊಂಡಿದ್ದರು. ನಂತರ, ಆರು ಜನ ಹಂತಕರು ಸ್ಥಳದಿಂದ ಪರಾರಿಯಾಗಿದ್ದರು.
ಶ್ರೀನಿವಾಸ್ ಅಂದು ಹಬ್ಬ ಮುಗಿಸಿಕೊಂಡು ಹೊಗಳಗೆರೆ ರಸ್ತೆಯಲ್ಲಿ ಹೊಸದಾಗಿ ನಿರ್ಮಾಣ ಮಾಡುತ್ತಿರುವ ರೆಸ್ಟೋರೆಂಟ್ ಕಾಮಗಾರಿ ವೀಕ್ಷಣೆ ಮಾಡಲು ತೆರಳಿದ್ದರು. ಅಲ್ಲಿ ಜೊತೆಗಿದ್ದವರೊಂದಿಗೆ ಟೀ ಕುಡಿಯುತ್ತಾ ಕೂತಿದ್ದ ವೇಳೆಯಲ್ಲಿ ಪರಿಚಯಸ್ಥ ಕೆಲವರು ಬಂದಿದ್ದರು. 'ಅಂಕಲ್ ಚೆನ್ನಾಗಿದ್ದೀರಾ?' ಎಂದು ಬಂದು ಕೈ ಕುಲುಕಿ ಈ ವೇಳೆ ಮುಖಕ್ಕೆ ಸ್ಪ್ರೇ ಹೊಡೆದಿದ್ದರು. ಬಳಿಕ ಹಿಂದಿನಿಂದ ಮಚ್ಚು ಮತ್ತು ಲಾಂಗಿನಿಂದ ತಲೆ, ಎದೆಯ ಭಾಗಕ್ಕೆ ಹಲ್ಲೆ ನಡೆಸಿದ್ದರು. ಪಕ್ಕದಲ್ಲಿದ್ದ ಅಮರ್ ಹಾಗೂ ಕೃಷ್ಣಪ್ಪ ಎಂಬವರ ಕೊಲೆಗೂ ಯತ್ನಿಸಿ, ಬಳಿಕ ಬೈಕ್ಗಳಲ್ಲಿ ಪರಾರಿಯಾಗಿದ್ದರು.
ಶ್ರೀನಿವಾಸ್ ಶ್ರೀನಿವಾಸಪುರದಲ್ಲಿ ಪ್ರಭಾವಿ ದಲಿತ ಮುಖಂಡರಾಗಿದ್ದರು. ಕಳೆದ ನಲವತ್ತು ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿದ್ದರು. ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ. ಪುರಸಭೆ ಸದಸ್ಯರಾಗಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗಿ ಮತ್ತು ಶ್ರೀನಿವಾಸಪುರ ಎಪಿಎಂಸಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. 2018ರವರೆಗೆ ಜೆಡಿಎಸ್ ಪಕ್ಷದಲ್ಲಿದ್ದರು. ಬಳಿಕ ಕಾಂಗ್ರೆಸ್ ಸೇರ್ಪಡೆಯಾಗಿದ್ದರು.
ಇದನ್ನೂ ಓದಿ:Watch.. ಪ್ರಕರಣ ಹಿಂಪಡೆಯಲು ನಿರಾಕರಿಸಿದವನ ಮೇಲೆ ಕಾರು ಹತ್ತಿಸಿ ಹತ್ಯೆ: ಆರೋಪಿಗಳ ಬಂಧಿಸಿದ ಬೆಂಗಳೂರು ಪೊಲೀಸರು