ಕೋಲಾರ: ಚಿಕ್ಕಮಗಳೂರು ಬಾಬಾಬುಡನ್ ಗಿರಿಯ ದತ್ತಪೀಠಕ್ಕೆ (Bababudangiri datta peeta) ಹೊರಟಿದ್ದ ಬಸ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರುವ ಘಟನೆ ಕೋಲಾರ (Kolar)ದಲ್ಲಿ ನಡೆದಿದೆ.
ನಿನ್ನೆ ರಾತ್ರಿ ಹನ್ನೊಂದು ಗಂಟೆಯ ಸುಮಾರಿಗೆ ಕೋಲಾರದ ಶ್ರೀರಾಮ ಸೇನೆ ಕಾರ್ಯಕರ್ತರು (Kolar Shri Rama Sena activists) ದತ್ತ ಮಾಲೆ ಧರಿಸಿ ದತ್ತ ಪೀಠಕ್ಕೆ ಒಂದು ಮಿನಿ ಬಸ್ನಲ್ಲಿ ಹೊರಟಿದ್ದರು. ಬಸ್ನಲ್ಲಿ ಜೈ ಶ್ರೀರಾಮ್ ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಿಕೊಂಡು ಹೊರಟಿದ್ದರು.
ದಾರಿಯಲ್ಲಿ ಗಲಾಟೆ:
ಕೋಲಾರದ ಕ್ಲಾಕ್ ಟವರ್ ಬಳಿಯ ವಿಶಾಲ್ ಮಾರ್ಟ್ ಎದುರು ಎರಡು ಗುಂಪುಗಳ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಗಲಾಟೆ ನಡೆದು ವಸೀಂ ಬೇಗ್ ಎಂಬುವವನಿಗೆ ರೌಡಿಶೀಟರ್ಗಳಾದ ಅಕ್ಬರ್, ಎಜಾಜ್ ಮತ್ತು ಜುಮ್ಮು ಎಂಬುವವರಿಂದ ಚಾಕು ಇರಿತವಾಗಿತ್ತು. ಈ ಪ್ರಕರಣದಲ್ಲಿ ಮೂವರಿಗೆ ಗಾಯಗಳಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಸ್ಥಳದಲ್ಲಿ ಮಾತ್ರ ಜನರು ಗುಂಪು ಸೇರಿದ್ದರು.
ಬಸ್ ಮೇಲೆ ಕಲ್ಲು ತೂರಾಟ:
ಈ ವೇಳೆ ಘೋಷಣೆಗಳನ್ನು ಕೂಗುತ್ತಾ ದತ್ತ ಮಾಲಾಧಾರಿಗಳಿದ್ದ ಬಸ್ ಅದೇ ಮಾರ್ಗವಾಗಿ ತೆರಳುತ್ತಿತ್ತು. ಆಗ ಅಲ್ಲಿದ್ದ ಕೆಲವು ಕಿಡಿಗೇಡಿಗಳು ಇದ್ದಕ್ಕಿದಂತೆ ಬಸ್ ಮೇಲೆ ಕಲ್ಲು ತೂರಾಟ ನಡೆಸಿದರು. ಅಲ್ಲದೇ ಬಸ್ ಅಡ್ಡಗಟ್ಟಿದ್ದಾರೆ. ಈ ಸಂದರ್ಭದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ದತ್ತ ಮಾಲಾಧಾರಿಗಳಿದ್ದ ಬಸ್ ಅಲ್ಲಿಂದ ತಕ್ಷಣ ಹೊರಟಿತ್ತು. ಆದರೂ ಬಸ್ನಲ್ಲಿದ್ದ ಮೂವರಿಗೆ ಗಾಯಗಳಾಗಿದೆ.
ವಿಷಯ ತಿಳಿದ ಕೋಲಾರ ನಗರ ಠಾಣಾ ಪೊಲೀಸರು (Kolar Police) ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸಿದರು. ಆದರೂ ಶ್ರೀರಾಮ ಸೇನೆ ಕಾರ್ಯಕರ್ತರು/ದತ್ತ ಮಾಲಾಧಾರಿಗಳು ಕೋಲಾರ ನಗರ ಠಾಣೆ ಎದುರು ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟಿಸಿದರು.
ಇದೀಗ ಇಡೀ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಪೊಲೀಸರು ಆರೋಪಿಗಳನ್ನು ಬಂಧಿಸುವ ಭರವಸೆ ಕೊಟ್ಟ ನಂತರ ಪ್ರತಿಭಟನೆ ಕೈಬಿಟ್ಟಿದ್ದು ಬೇರೊಂದು ವಾಹನದಲ್ಲಿ ಮಾಲಾಧಾರಿಗಳು ಹೊರಟರು.
ಇದನ್ನೂ ಓದಿ:ಚಿಕ್ಕಮಗಳೂರಿನಲ್ಲಿ ದತ್ತಮಾಲಾ ಅಭಿಯಾನ: ಮಾಲಾಧಾರಿಗಳಿಂದ ಪಡಿ ಸಂಗ್ರಹ
ಎಸ್ಪಿ ಕಿಶೋರ್ಬಾಬು ಹಾಗೂ ಜಿಲ್ಲಾಧಿಕಾರಿ ಸೆಲ್ವಮಣಿ ನಗರದಲ್ಲಿ ರೌಂಡ್ಸ್ ಮಾಡಿ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಿದರು. ಮುಂಜಾಗೃತಾ ಕ್ರಮವಾಗಿ ನಗರದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.