ಕೋಲಾರ: ಕಳೆದ ಮೂರು ದಿನಗಳಿಂದ ಜಿಲ್ಲೆಯ ಹಲವೆಡೆ ಬೀಳುತ್ತಿರುವ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ, ಲಕ್ಷಾಂತರ ರೂ. ಬೆಳೆ ಹಾನಿಯಾಗಿದೆ. ಬಿರುಗಾಳಿ ಸಹಿತ ಮಳೆಗೆ ನೆಲಕ್ಕೆ ಬಿದ್ದಿರುವ ಟೊಮ್ಯಾಟೊ, ಬಾಳೆ ಹಾಗೂ ಮಾವು ಹಾಳಾಗಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಶ್ರೀನಿವಾಸಪುರ, ಬಂಗಾರಪೇಟೆ ತಾಲೂಕುಗಳ ಹಲವೆಡೆ ಗುಡುಗು ಸಹಿತ ಬಿರುಗಾಳಿ ಮಳೆಯಾಗಿ ನೂರಾರು ಎಕರೆ ತೋಟಗಾರಿಕೆ ಬೆಳೆಗಳು ನೆಲಕಚ್ಚಿವೆ. ಅದರಲ್ಲೂ ಶ್ರೀನಿವಾಸಪುರದ ಕೆಲವು ಗ್ರಾಮಗಳಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಲಕ್ಷಾಂತರ ರೂ. ಮಾವು ನೆಲಕ್ಕುದುರಿದೆ. ಇನ್ನೇನು ಫಸಲು ಕೊಯ್ದು ಲಾಭದ ನಿರೀಕ್ಷೆಯಲ್ಲಿ ಬೆಳೆದಿದ್ದ ಬೆಳೆ ಮಣ್ಣು ಪಾಲಾಗಿರುವುದು ರೈತರು ಕಂಗಾಲಾಗುವಂತೆ ಮಾಡಿದೆ.
ಇನ್ನು ಮಳೆಗಿಂತ ಹೆಚ್ಚಾಗಿ ಆಲಿಕಲ್ಲು ಹಾಗೂ ಬಿರುಗಾಳಿಯ ಅಬ್ಬರಕ್ಕೆ ಲಕ್ಷಾಂತರ ರೂ. ಬಾಳೆ ನೆಲಕ್ಕುರುಳಿದೆ. ಈ ಬರಗಾಲದಲ್ಲಿ ಇದ್ದ ಸಲ್ಪಸ್ವಲ್ಪ ನೀರಿನಲ್ಲೇ ಲಕ್ಷಾಂತರ ರೂ. ಬಂಡವಾಳ ಹಾಕಿ, ಒಳ್ಳೆಯ ಬೆಳೆ ಬೆಳೆದು ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ರಾತ್ರೋರಾತ್ರಿ ವರುಣದೇವ ಆಘಾತವನ್ನುಂಟು ಮಾಡಿದ್ದಾನೆ. ಕಳೆದ ಮೂರು ದಿನಗಳಿಂದ ಬಿದ್ದ ಮಳೆಯಿಂದ ಸುಮಾರು ಎಕರೆಗಳಲ್ಲಿ ಮಾವು ಬೆಳೆ ನಷ್ಟವಾಗಿದ್ದು, ಈಗಾಗಲೇ ಕಂದಾಯ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜಂಟಿ ಸರ್ವೇ ನಡೆಸುತ್ತಿದ್ದಾರೆ.
ಜಿಲ್ಲೆಯಲ್ಲಿ ಮಳೆಯಿಂದಾಗಿ ಎಷ್ಟು ನಷ್ಟ ಉಂಟಾಗಿದೆ ಎಂದು ಸರ್ಕಾರಕ್ಕೆ ಕಳುಹಿಸಿಕೊಡಲು ಅಧಿಕಾರಿಗಳು ಕೂಡ ತೋಟಗಳಿಗೆ ಭೇಟಿ ನೀಡಿ ರೈತರಿಗೆ ಧೈರ್ಯ ತುಂಬಿ ಪರಿಹಾರ ಕೊಡಿಸಲು ಮುಂದಾಗಿದ್ದಾರೆ.