ಕೋಲಾರ :ಬೆಳಗಾವಿಯಲ್ಲಿ ಕಾಂತ್ರಿಕಾರಿ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಧ್ವಂಸಗೊಳಿಸಿ ವಿಕೃತಿ ಮೆರೆದಿರುವ ಎಂಇಎಸ್ ಕಿಡಿಗೇಡಿಗಳು ಪುಂಡಾಟ ನಿಲ್ಲಿಸಬೇಕು. ಎಲ್ಲಾ ರಾಜ್ಯದಲ್ಲೂ ಎಲ್ಲಾ ಭಾಷೆಯ ಜನರಿದ್ದಾರೆ ಎಂಬುದನ್ನು ಅರಿತುಕೊಳ್ಳಬೇಕು ಎಂದು ನಟ ಡಾಲಿ ಧನಂಜಯ್ ಹೇಳಿದರು.
ನಗರದ ನರಸಾಪುರದಲ್ಲಿ ಪುನೀತ್ ನಮನ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬೆಳಗಾವಿಯಲ್ಲಿ ನಡೆಯುತ್ತಿರುವ ಗಲಭೆಯನ್ನು ನಿಲ್ಲಿಸಬೇಕು. ಮಹಾರಾಷ್ಟ್ರದಲ್ಲಿ ಕನ್ನಡಿಗರಿದ್ದಾರೆ. ಅದರಂತೆ ರಾಜ್ಯದಲ್ಲೂ ಮರಾಠಿಗರಿದ್ದಾರೆ.
ಇಂತಹ ಕೆಲ ಕಿಡಿಗೇಡಿಗಳು ಮಾಡುವ ಅಹಿತಕರ ಘಟನೆಗಳಿಂದ ಇನೋಸೆಂಟ್ ಜನರಿಗೆ ತೊಂದರೆಯಾಗಬಾರದು. ಈ ಕುರಿತಂತೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಕಲಾವಿದನಾಗಿ, ಸಾಮಾನ್ಯ ವ್ಯಕ್ತಿಯಾಗಿ ಪ್ರತಿಭಟಿಸಬಹುದು. ರಾಜ್ಯದಲ್ಲಿ ಸಾಮರಸ್ಯ ಕದಡುವ ಕೆಲಸ ಆಗಬಾರದು. ಹೋರಾಟದ ವಿಚಾರಕ್ಕೆ ಚಲನಚಿತ್ರ ಮಂಡಳಿಯ ಯಾವುದೇ ನಿರ್ಧಾರಕ್ಕೂ ನಾನು ಬದ್ಧ ಎಂದರು.