ಕೋಲಾರ:ಜಿಲ್ಲೆಯ ಮೂರು ಸ್ಥಳೀಯ ಸಂಸ್ಥೆಗಳಾದ ಮಾಲೂರು, ಶ್ರೀನಿವಾಸಪುರ ಮತ್ತು ಬಂಗಾರಪೇಟೆ ಪುರಸಭೆಗಳಿಗೆ ಇಂದು ಶಾಂತಿಯುತವಾಗಿ ಮತದಾನ ನಡೆದಿದೆ.
ಬಂಗಾರಪೇಟೆ ಪಟ್ಟಣದ ವಾರ್ಡ್ ನಂ.20 ಹಾಗೂ 21ರಲ್ಲಿ ಕೆಲ ಕಾಲ ಇವಿಎಂ ಕೈಕೊಟ್ಟಿದ್ದು, ಸ್ಥಳಕ್ಕೆ ಆಗಮಿಸಿದ ಚುನಾವಣಾಧಿಕಾರಿಗಳು ಹಾಗೂ ತಂತ್ರಜ್ಞರು ಇವಿಎಂಗಳನ್ನು ಸರಿಪಡಿಸಿದರು. ಬಂಗಾರಪೇಟೆ ಶಾಸಕ ಹಾಗೂ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಎನ್.ನಾರಾಯಣಸ್ವಾಮಿ ಅವರು ಪಟ್ಟಣದ ವಾರ್ಡ್ ನಂ.8 ಮತ್ತು ಜಿಲ್ಲಾಧ್ಯಕ್ಷ ಚಂದ್ರಾರೆಡ್ಡಿ ಮತಗಟ್ಟೆ 13ರಲ್ಲಿ ಮತ ಚಲಾಯಿಸಿದರು.
ಬಳಿಕ ಬಂಗಾರಪೇಟೆ ಶಾಸಕ ಹಾಗೂ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಎನ್. ನಾರಾಯಣಸ್ವಾಮಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಕಾಂಗ್ರೆಸ್ ಮುಕ್ತ ಮಾಡುವವರು ಇನ್ನು ಹುಟ್ಟಿಲ್ಲ. ಮುಂದೆಯೂ ಹುಟ್ಟಲ್ಲ ಎಂದು ನೂತನ ಸಂಸದ ಎಸ್.ಮುನಿಸ್ವಾಮಿ ಅವರ ಮಾತಿಗೆ ಶಾಸಕರು ತಿರುಗೇಟು ನೀಡಿದರು. ಸಂಸದರು ಯಾರ ನೆರಳಿನಿಂದ ಗೆದ್ದರು ಎಂಬುದನ್ನು ಮರೆತ್ತಿದ್ದಾರೆ. ಕಾಂಗ್ರೆಸ್ ಮುಕ್ತ ಅನ್ನೋದು ಅವರ ಕನಸು. 15 ದಿನದಲ್ಲಿ ಆಚಾನಕ್ಕಾಗಿ ಸಂಸದರಾಗಿದ್ದಾರೆ. ಜಿಲ್ಲೆಯ ಬಗ್ಗೆ ಮಾಹಿತಿಯಿಲ್ಲ. ಅವರಿಗೆ ಜಿಲ್ಲೆಯ ರಾಜಕಾರಣ, ಜನರ ನಾಡಿಮಿಡಿತ ಗೊತ್ತಿಲ್ಲ ಎಂದರು.