ಕೋಲಾರ: ಅಮ್ಮನ ಪ್ರೀತಿಯ ಮಡಿಲಲ್ಲಿ ಆಡಬೇಕಿದ್ದ ಪುಟ್ಟ ಬಾಲಕಿ, ತನ್ನ ತಾಯಿಯನ್ನು ಆರೈಕೆ ಮಾಡುತ್ತಾ, ವೀಲ್ ಚೇರ್‌ನಲ್ಲಿ ಕೂರಿಸಿ ಕಿಲೋಮೀಟರ್ ಗಟ್ಟಲೆ ತಳ್ಳಿಕೊಂಡು ಹೋಗುತ್ತಿರುವ ದೃಶ್ಯ ಕರುಣಾಜನಕವಾಗಿದೆ.
ಪುಟ್ಟ ಬಾಲಕಿಯೊಬ್ಬಳು ಕಾಲಿನ ಸ್ವಾಧೀನ ಕಳೆದುಕೊಂಡ ತಾಯಿಯನ್ನ ವೀಲ್ ಚೇರ್‌ನಲ್ಲಿ ಕೂರಿಸಿಕೊಂಡು ಕೋಲಾರದಿಂದ ತನ್ನೂರಾದ ಚನ್ನೈಗೆ ಸಂಚರಿಸುತ್ತ ಕಳೆದುಕೊಂಡ ಅಣ್ಣನಿಗಾಗಿ ಹುಡುಕಾಟ ನಡೆಸುತ್ತಿದ್ದಾಳೆ. ಚೆನ್ನೈ ಮೂಲದವರಾದ ತಾಯಿ ಪ್ರತಿಮಾ, ಮಗಳು ಫಾತಿಮಾ ಹಾಗೂ ಆಕೆಯ ಮಗ ಉದ್ಯೋಗ ಅರಸಿ ಮೂರು ತಿಂಗಳ ಹಿಂದೆ ಕೋಲಾರದ ಬಂಗಾರಪೇಟೆ ಪಟ್ಟಣಕ್ಕೆ ಬಂದಿದ್ದರು. ಕೊರೊನಾ ಪ್ರೇರಿತ ಲಾಕ್ಡೌನ್ನಿಂದಾಗಿ ತುತ್ತು ಅನ್ನಕ್ಕೂ ಪರದಾಡಿದ್ದರು. ಅಮ್ಮ ಮತ್ತು ತಂಗಿಯ ಹಸಿವು ನೀಗಿಸಲು ಮಗ ಭಿಕ್ಷೆ ಬೇಡಿ, ಸಣ್ಣ-ಪುಟ್ಟ ಕೆಲಸ ಮಾಡಿ, ಬಂದ ಹಣದಿಂದ ತನ್ನ ತಾಯಿ ತಂಗಿಯ ಹೊಟ್ಟೆ ತುಂಬಿಸುತ್ತಿದ್ದ.
ತಾನು ಕಷ್ಟಪಟ್ಟು ಸಂಪಾದಿಸಿದ ಊಟವನ್ನ ತಾಯಿ, ತಂಗಿಗೆ ನೀಡುತ್ತಿದ್ದ ಮಗ ಕಳೆದೊಂದು ತಿಂಗಳಿನಿಂದ ಇದ್ದಕ್ಕಿದ್ದಂತೆ ಕಾಣೆಯಾಗಿಬಿಟ್ಟಿದ್ದಾನೆ. ಬಂಗಾರಪೇಟೆ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಎಷ್ಟೇ ಹುಡುಕಾಟ ನಡೆಸಿದರೂ ಸಹ ಫಾತಿಮಾಳ ಅಣ್ಣ ಮಾತ್ರ ಗೋಚರಿಸುತ್ತಲೇ ಇಲ್ಲ.
ತಾಯಿಯನ್ನು ವೀಲ್ಚೇರ್ ನಲ್ಲಿ ಕೂರಿಸಿ ಅಣ್ಣನ ಹುಡುಕಾಟಕ್ಕೆ ಸಾಗುತ್ತಿರುವ ಬಾಲಕಿ ಜಗತ್ತಿನ ಜ್ಞಾನವರಿಯದ ಈ ಪುಟ್ಟ ಬಾಲಕಿ ಫಾತಿಮಾಗೆ ಒಂದೆಡೆ ಕಳೆದುಕೊಂಡಿರುವ ಅಣ್ಣನನ್ನು ಹುಡುಕುವ ಚಿಂತೆಯಾದರೆ ಇನ್ನೊಂದೆಡೆ ಕೆಲಸ ಮಾಡುವ ವೇಳೆ ಅವಘಡ ಜರುಗಿ ಕಾಲು ಕಳೆದುಕೊಂಡಿರುವ ತಾಯಿಯನ್ನು ನೊಡಿಕೊಳ್ಳುವುದು ಹಾಗೂ ಇವರಿಬ್ಬರ ಹೊಟ್ಟೆ ಪಾಡಿಗೆ ಏನು ಮಾಡುವುದು ಎಂಬ ಹಸಿವು ಕಾಡತೊಡಗಿದೆ. ಏನಾದರೂ ಸರಿ ಅಣ್ಣನನ್ನ ಹುಡುಕಲೇ ಬೇಕು ಎಂದಿರುವ ಬಾಲಕಿ ವೀಲ್ ಚೇರ್ ನಲ್ಲಿಯೇ ತನ್ನ ಅಮ್ಮನನ್ನು ಕುಳ್ಳಿರಿಸಿಕೊಂಡು ಅಣ್ಣನಿಗಾಗಿ ಊರೆಲ್ಲ ಹುಡುಕಾಟ ನಡೆಸುತ್ತಿದ್ದಾಳೆ.
ಈ ಮಧ್ಯೆ ತನ್ನ ತಾಯಿಗೆ ಚಿಕಿತ್ಸೆ ಕೊಡಿಸುವ ಸಲುವಾಗಿ ಹಾಗೂ ಆಕೆಯ ಅಣ್ಣ ಕೋಲಾರದಲ್ಲಿ ಇದ್ದಾನೆಂಬ ಮಾಹಿತಿ ಫಾತಿಮಾಗೆ ತಿಳಿದು ಬಂದ ಕಾರಣ ಬಂಗಾರಪೇಟೆ ಪಟ್ಟಣದಿಂದ ತನ್ನ ತಾಯಿಯನ್ನ ವೀಲ್ ಚೇರ್ ನಲ್ಲಿ ಕೂರಿಸಿಕೊಂಡು ರಸ್ತೆಯುದ್ದಕ್ಕೂ ತಳ್ಳಿಕೊಂಡು ಕೋಲಾರಕ್ಕೆ ಆಗಮಿಸಿದ್ದಾಳೆ. ಆದರೆ, ಆಕೆಯ ಅಣ್ಣ ಮಾತ್ರ ಇಲ್ಲಿಯೂ ಕಾಣಸಿಗುತ್ತಿಲ್ಲ.
ಲಾಕ್ಡೌನ್ನಿಂದಾಗಿ ಎಲ್ಲಿಯೂ ಕೆಲಸ ಸಿಗದೇ, ತುತ್ತು ಅನ್ನಕ್ಕಾಗಿ ಪರದಾಡಿದ ಬಾಲಕಿ ಫಾತಿಮಾ, ಜೊತೆಗೆ ತನ್ನ ಅಣ್ಣನ ಫೋಟೊ ಸಹ ಇಲ್ಲದೇ, ವಿಳಾಸ ಕೇಳುವುದಕ್ಕೂ ಆಗದೆ, ವೀಲ್ ಚೇರ್ನಲ್ಲಿಯೇ ತನ್ನ ತಾಯಿಯನ್ನ ಕುಳ್ಳರಿಸಿಕೊಂಡು ಹುಡುಕಾಟ ನಡೆಸುತ್ತಿರುವ ದೃಶ್ಯ ಎಂತಹ ಕಲ್ಲು ಹೃದಯದವರನ್ನೂ ಒಮ್ಮೆ ಕರಗುವಂತೆ ಮಾಡಿದೆ.
ಸಹಪಾಠಿಗಳೊಂದಿಗೆ ಆಟ - ಪಾಠಗಳನ್ನು ಕಲಿಯಬೇಕಿದ್ದ ಕಂದಮ್ಮವೊಂದು ತಾಯಿಯ ಕಾಲಿನ ಚಿಕಿತ್ಸೆಗಾಗಿ, ಅಣ್ಣನ ಹುಡುಕಾಟಕ್ಕಾಗಿ ಪರಿತಪಿಸುತ್ತಿರುವ ಸ್ಥಿತಿ ನೋಡುಗರಲ್ಲಿ ಕಣ್ಣೀರು ತರಿಸುವಂತಿದೆ.