ಕೋಲಾರ: ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ ನಡೆದಿದೆ. ತಾಲೂಕಿನ ಹೊಲೇರಹಳ್ಳಿ ಗ್ರಾಮದಲ್ಲಿ ಜಗಳ ನಡೆದಿದ್ದು, ಘಟನೆಯಲ್ಲಿ 15 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಚಿಕ್ಕ ವೆಂಕಟೇಶಪ್ಪ ಮತ್ತು ಅಶೋಕ್ ಎಂಬುವರ ಕುಟುಂಬಗಳ ನಡುವೆ ಗಲಾಟೆ ನಡೆದಿದ್ದು, ಗಾಯಾಳುಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಹಿಳೆಯರನ್ನು ಸಹ ಅಟ್ಟಾಡಿಸಿ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದು, ಗಲಾಟೆಯಲ್ಲಿ ಎರಡು ಕಡೆಯ 15 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅಲ್ಲದೆ ಇಬ್ಬರು ಮಹಿಳೆಯರ ಬೆನ್ನು ಮೂಳೆಗೆ ಬಲವಾದ ಪೆಟ್ಟು ಬಿದ್ದಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕ್ಕವೆಂಕಟೇಶಪ್ಪ ಎನ್ನುವರಿಗೆ ಎರಡೂ ಕೈ ಮುರಿದಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಿಳೆಯರ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿರುವ ವಿಡಿಯೋ ವೈರಲ್ ಆಗಿದ್ದು, ವೇಮಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಜಮೀನು ವಿಚಾರಕ್ಕೆ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ ಹೊಲೇರಹಳ್ಳಿ ಗ್ರಾಮದಲ್ಲಿ ಸ್ಮಶಾನ ಜಾಗವನ್ನು ಅಧಿಕಾರಿಗಳು ಸರ್ವೆ ನಡೆಸಿದ್ದು, ಈ ವೇಳೆ ಸ್ಮಶಾನದ ಜಾಗ ತಮಗೆ ಸೇರಿದ್ದು ಎಂದು ಎರಡು ಕುಟುಂಬಗಳ ಮಧ್ಯೆ ಗಲಾಟೆ ಉಂಟಾಗಿದೆ. ಮೊದಲು ಅಧಿಕಾರಿಗಳು ಸರ್ವೆ ನಡೆಸಿ ಸರ್ಕಾರಿ ಜಾಗ ಎಂದು ಗುರುತಿಸಿ ಬೋರ್ಡ್ ಸಹ ಹಾಕಿದ್ದರು. ಆದರೆ ಬೋರ್ಡ್ನ್ನು ಕೆಲವರು ಕಿತ್ತೆಸೆದು, ಮತ್ತೊಮ್ಮೆ ಸರ್ವೆ ನಡೆಸುವಂತೆ ಆಗ್ರಹಿಸಿದ್ದರು.