ಕರ್ನಾಟಕ

karnataka

ETV Bharat / state

ಯುವತಿಗೆ ಬಸ್​ನಲ್ಲಿ ಬಣ್ಣ ಹಚ್ಚಿ ರಾದ್ಧಾಂತ: ಸುಪಾರಿ ಕೊಟ್ಟು ಯುವಕನ ಕಿಡ್ನಾಪ್​, ಹಲ್ಲೆ.. ಯುವತಿ ವಿರುದ್ಧ ಗಂಭೀರ ಆರೋಪ - ಕೋಲಾರ ತಾಲೂಕು ಬೆಳಮಾರನಹಳ್ಳಿ

ಹೋಳಿ ಹಬ್ಬದ ದಿನ ಬಸ್​ನಲ್ಲಿ ಬಣ್ಣ ಹಚ್ಚಿದ್ದಕ್ಕೆ ಸಿಟ್ಟು- ಸಿನಿಮಾ ಸ್ಟೈಲ್​ನಲ್ಲಿ ಸುಪಾರಿ ಕೊಟ್ಟು ಯುವಕನ ಕಿಡ್ನಾಪ್​- ಮಾರಣಾಂತಿಕ ಹಲ್ಲೆ, ಆರೋಪಿ ಯುವತಿ ಅರೆಸ್ಟ್​

Vemagal Police Station
ವೇಮಗಲ್ ಪೊಲೀಸ್ ಠಾಣೆ

By

Published : Mar 22, 2023, 4:28 PM IST

Updated : Mar 22, 2023, 4:53 PM IST

ಸುಪಾರಿ ಕೊಟ್ಟು ಯುವಕನ ಕಿಡ್ನಾಪ್ ಹಲ್ಲೆ ಪ್ರಕರಣ

ಕೋಲಾರ: ಹೋಳಿ ಹಬ್ಬದ ವೇಳೆ ಪಕ್ಕದ ಮನೆಯ ಯುವತಿಗೆ ಯುವಕನೊಬ್ಬ ಬಣ್ಣ ಹಚ್ಚಿದ ಪರಿಣಾಮ, ರೊಚ್ಚಿಗೆದ್ದ ಯುವತಿ ಯಾವುದೇ ಸಿನಿಮಾ ಸ್ಟೈಲ್​ಗೂ ಕಡಿಮೆ ಇಲ್ಲದಂತೆ ಸುಪಾರಿ ನೀಡಿ, ಯುವಕನನ್ನು ಕಿಡ್ನಾಪ್ ಮಾಡಿಸಿ ಮಾರಣಾಂತಿಕವಾಗಿ ಹಲ್ಲೆ ಮಾಡಿಸಿರುವ ಆರೋಪ ಪ್ರಕರಣ ಜಿಲ್ಲೆಯಲ್ಲಿ ಮಾ.17 ರಂದು ನಡೆದಿತ್ತು. ಹಲ್ಲೆಯಿಂದ ತೀವ್ರ ಗಾಯಗೊಂಡಿದ್ದ ಬೆಳಮಾರನಹಳ್ಳಿಯ ಬಿ.ಸಿ. ಮಧು ಎಂಬ ಕಾನೂನು ವಿದ್ಯಾರ್ಥಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿ ಸಿ ಮಧು ಮೈಮೇಲೆ ಕಿರಾತಕರು ತೀವ್ರ ಹಲ್ಲೆ, ದೌರ್ಜನ್ಯ ಎಸಗಿದ್ದಾರೆ ಎಂದು ಆತನ ಪೋಷಕರು ಆರೋಪಿಸಿದ್ದಾರೆ.

ಪ್ರಕರಣ ಹಿನ್ನೆಲೆ.. ಹೌದು.. ಕೋಲಾರ ತಾಲೂಕು ಬೆಳಮಾರನಹಳ್ಳಿಯ ಕಾನೂನು ವಿದ್ಯಾರ್ಥಿ ಬಿ.ಸಿ. ಮಧು ಮಾರ್ಚ್​17 ರಂದು ಹೋಳಿ ಹಬ್ಬದಂದು ಅದೇ ಗ್ರಾಮದ ಎಂಜಿನಿಯರಿಂಗ್ ಓದುತ್ತಿದ್ದ ಪಕ್ಕದ ಮನೆಯ ಯುವತಿ ಅನು ಪ್ರಿಯಾಗೆ ಬಸ್​ನಲ್ಲಿ ಬಣ್ಣ ಹಚ್ಚಿದ್ದಾನೆ. ಬಣ್ಣ ಹಚ್ಚಿದ್ದಕ್ಕೆ ಅನುಪ್ರಿಯಾ ಪಕ್ಕದ ದಾನಹಳ್ಳಿ ಗ್ರಾಮದ ಡಿ.ಎನ್.ಡಿ ಮಧು ಹಾಗೂ ಆತನ ಸಹಚರರಿಗೆ ಸುಪಾರಿ ಕೊಟ್ಟು ಬಣ್ಣಹಚ್ಚಿದ ಕಾನೂನು ವಿದ್ಯಾರ್ಥಿ ಬಿ ಸಿ ಮಧುಗೆ ಹೊಡೆಯುವಂತೆ ತಿಳಿಸಿದ್ದಳು. ಈ ವೇಳೆ ಸುಪಾರಿ ಪಡೆದ D.N.D. ಮಧು ಅದೇ ಗ್ರಾಮದ ಪ್ರಮೋದ್, ಶಿವರಾಜ್, ಸುದರ್ಶನ್ ಅವರ ಸಹಾಯದಿಂದ ಮಧುಗೆ ದೂರವಾಣಿ ಮೂಲಕ ಗ್ರಾಮದ ಬೇಕರಿ ಬಳಿ ಬರುವಂತೆ ಕರೆಸಿಕೊಂಡು‌ ಅಲ್ಲಿಂದ ಕಿಡ್ನಾಪ್ ಮಾಡಿ ಹಲ್ಲೆ ನಡೆಸಿದ್ದರು ಎಂದು ಹಲ್ಲೆಗೊಳಗಾದ ಯುವಕನ ಸಂಬಂಧಿಕರು ದೂರಿದ್ದಾರೆ.

ಇನ್ನು ಮಾ.17 ರಂದು ಮನೆಯಲ್ಲಿದ್ದ ಬಿ.ಸಿ. ಮಧು ಅವರನ್ನು ಬೇಕರಿ ಬಳಿ ಕರೆಸಿಕೊಂಡ ಡಿಎನ್ ಡಿ ಮಧು ತನ್ನ ಸಹಚರರೊಂದಿಗೆ ಮಧು ಅವರನ್ನು ಕಾರಿನಲ್ಲಿ ಕೂರಿಸಿಕೊಂಡು ಗ್ರಾಮದ‌‌ ಹೊರವಲಯದ‌ ದಾನಹಳ್ಳಿ ಮತ್ತು ‌ವಿಶ್ವನಾಥಪುರ ಗ್ರಾಮದ ಮಧ್ಯೆ‌ ಇರುವ ನೀಲಗಿರಿ ತೋಪಿನಲ್ಲಿ‌, ನೀಲಗಿರಿ ರೆಂಬೆಗಳಿಂದ‌ ಮನಬಂದಂತೆ ಥಳಿಸಿದ್ದಾರೆ. ಸುಮಾರು ಎರಡು ದಿನ ಕಾಲ ಬಣ್ಣ ಹಚ್ಚಿದ ಬಿ ಸಿ ಮಧು‌ ಅವರನ್ನು ಚೆನ್ನಾಗಿ ಥಳಿಸಿದ್ದಾರೆ. ಜತೆಗೆ ಮಧು ಕೈಯಾರೆ ಅವರ ಪೋಷಕರಿಗೆ ಫೋನ್ ಮಾಡಿಸಿ ನಾನು ಧರ್ಮಸ್ಥಳ ಹೋಗುತ್ತಿದ್ದು, ಎರಡು ದಿನಗಳ ಕಾಲ ಮನೆಗೆ ಬರುವುದಿಲ್ಲವೆಂದು ಹೇಳಿಸಿದ್ದಾರೆ. ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಮಧು ಅವರನ್ನು ಇದೇ ಆರೋಪಿಗಳು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಅಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆ ನೀಡಬೇಕೆಂದಾಗ, ಬೆಳಮಾರನಹಳ್ಳಿ ಗ್ರಾಮದ ಹೊರವಲಯದಲ್ಲಿ ಬಿಟ್ಟು, ಯಾರಿಗಾದರೂ‌ ಹೇಳಿದರೆ ನಿನ್ನನ್ನು ಮತ್ತು ಕುಟುಂಬ‌ ಅವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಪರಾರಿ ಆಗಿದ್ದಾರೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಮಾಹಿತಿ ನೀಡಿದ್ದಾರೆ.

ತೀವ್ರ ಗಾಯಗೊಂಡಿದ್ದ ಬಿ ಸಿ ಮಧು ಮನೆಗೆ ಬಂದಾಗ ಪೋಷಕರು ಕೂಡಲೇ ಆಸ್ಪತ್ರೆಗೆ ದಾಖಲಿಸಿ, ನಂತರ ವಿಚಾರಿಸಿದಾಗ ಸತ್ಯ ಬಯಲಿಗೆ ಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ವೇಮಗಲ್ ಠಾಣೆ ಪೊಲೀಸರು 15ಕ್ಕೂ ಹೆಚ್ಚು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದು, ಸದ್ಯ ಅನುಪ್ರಿಯಾ ಹಾಗೂ ಮತ್ತಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯ ಪ್ರಮುಖ ಆರೋಪಿ D.N.D.ಮಧು ಪರಾರಿಯಾಗಿದ್ದು, ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂಓದಿ:ಆಸ್ತಿ ವೈಷಮ್ಯ: ಸ್ನೇಹಿತನ ಮೇಲೆ ಕಾರು ಹತ್ತಿಸಿ ವಿಕೃತಿ; ಆರೋಪಿಯ ಬಂಧನ

Last Updated : Mar 22, 2023, 4:53 PM IST

ABOUT THE AUTHOR

...view details