ಕೋಲಾರ: ಗ್ರಾಮಾಂತರ ಠಾಣೆಯ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಕುಖ್ಯಾತ 8 ಜನ ಡಕಾಯಿತರ ತಂಡದಲ್ಲಿ ಆರು ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ರಾಜ್ಯದ ವಿವಿಧೆಡೆ ಬೈಕ್ ಹಾಗೂ ಸರಗಳ್ಳತನ ಪ್ರಕರಣಗಳಲ್ಲಿ ತೊಡಗಿದ್ದ ಬೆಂಗಳೂರು ಮೂಲದ ಚಂದ್ರಶೇಖರ್, ಧನಂಜಯ್, ಧೀಕ್ಷಿತ್, ಯತೀಶ್, ಬಸವರಾಜ್ ಹಾಗೂ ಇನ್ನೋರ್ವ ಬಾಲಕ ಸೇರಿ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದ ಇಬ್ಬರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಬಂಧಿತರಿಂದ 12 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಮೂರು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರು ಖದೀಮರ ಬಂಧನ ಬೆಂಗಳೂರು ಗ್ರಾಮಾಂತರ, ರಾಮನಗರ, ಬೆಂಗಳೂರು ನಗರ, ದೊಡ್ಡಬಳ್ಳಾಪುರ, ಕೋಲಾರದ ಮಾಲೂರು, ಮಾಸ್ತಿ, ಹೀಗೆ ರಾಜ್ಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಈ ಡಕಾಯಿತರ ಗ್ಯಾಂಗ್ ವಿರುದ್ಧ 18 ಪಕ್ರರಣಗಳು ದಾಖಲಾಗಿದ್ದು, ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದರು. ಇನ್ನು, ಇದೇ ರೀತಿ ನಾಲ್ಕು ಕಡೆ ಮನೆಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕೋಲಾರ ಮೂಲದ ಅಡುಗೆ ಶಂಕರ್ ಅಲಿಯಾಸ್ ಶಂಕರ್ ಎಂಬ ಮತ್ತೋರ್ವ ಆರೋಪಿಯನ್ನು ಕೋಲಾರ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 150 ಗ್ರಾಂ ಚಿನ್ನಾಭರಣ, 1 ಕೆಜಿ ಬೆಳ್ಳಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದೀಗ ಕೋಲಾರ ಗ್ರಾಮಾಂತರ ಹಾಗೂ ನಗರ ಪೊಲೀಸರ ಮಿಂಚಿನ ಕಾರ್ಯಾಚರಣೆಗೆ ಎಸ್ಪಿ ಕಾತಿ೯ಕ್ ರೆಡ್ಡಿ ಮೆಚ್ಚುಗೆ ವ್ಯಕ್ತಪಡಿಸಿ, ಪ್ರಶಂಸೆ ಪತ್ರದೊಂದಿಗೆ 10 ಸಾವಿರ ನಗದನ್ನು ಬಹುಮಾನವಾಗಿ ನೀಡಿದ್ದಾರೆ.