ಕೋಲಾರ: ಎಸಿಬಿ ಅಧಿಕಾರಿಗಳ ಸೋಗಿನಲ್ಲಿ ಅಧಿಕಾರಿಯೊಬ್ಬರಿಗೆ ಕರೆ ಮಾಡಿ ಹಣಕ್ಕೆ ಬೇಡಿಕೆಯಿಟ್ಟಿದ್ದ ಮೂವರು ಚಾಲಾಕಿಗಳ ಅಸಲಿ ಮುಖವಾಡ ಬಯಲಾಗಿದೆ. ಕೋಲಾರ ಗ್ರಾಮಾಂತರ ಪೊಲೀಸರು ನಕಲಿ ಅಧಿಕಾರಿಗಳ ಹೆಡೆಮುರಿ ಕಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯ ಸಾದಲಗ ಮೂಲದ ಮುರಿಗೆಪ್ಪ, ಸಕಲೇಶಪುರ ಮೂಲದ ರಜನಿಕಾಂತ್, ಮಹಾರಾಷ್ಟ್ರ ಮೂಲದ ರಾಜೇಶ್ ಬಂಧಿತ ಆರೋಪಿಗಳು.
ಈ ಮೂವರು ನಕಲಿ ಎಸಿಬಿ ಅಧಿಕಾರಿಗಳು ಕೋಲಾರದ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾದ ನಾರಾಯಣ ಗೌಡ ಎಂಬುವವರಿಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ತಮ್ಮ ಭ್ರಷ್ಟಾಚಾರದ ಬಗ್ಗೆ ನಮಗೆ ಮಾಹಿತಿ ಬಂದಿದೆ. ನಿಮ್ಮ ಮೇಲೆ ದಾಳಿ ಮಾಡದಂತೆ ಇರಬೇಕಾದರೆ ನಾವು ಹೇಳಿದ ಅಕೌಂಟ್ಗೆ ಒಂದು ಲಕ್ಷ ರೂಪಾಯಿ ಹಣ ಹಾಕಿ ಎಂದು ಬೆದರಿಕೆ ಹಾಕಿದ್ದರು. ಇದರಿಂದ ಅನುಮಾನಗೊಂಡ ನಾರಾಯಣ ಗೌಡ ಅವರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಎಸ್ಪಿ ಡಿ. ದೇವರಾಜ್ ಅವರ ಮಾರ್ಗದರ್ಶನದಲ್ಲಿ ಬಾಗಲಕೋಟೆಯಲ್ಲಿ ಈ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.