ಕೋಲಾರ:ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿಂದು ಆಯೊಜಿಸಿರುವ ಎರಡು ದಿನಗಳ ಕಾಲ ನಡೆಯುವ 18ನೇ ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನ ದೀಪ ಬೆಳಗಿಸುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಉದ್ಘಾಟಿಸಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ರಾಷ್ಟ್ರದ್ವಜ ಹಾಗೂ ನಾಡದ್ವಜ ದ್ವಜಾರೋಹಣ, ಜೊತೆಗೆ ಸಮ್ಮೇಳನಾಧ್ಯಕ್ಷರಾದ ಸಿ.ಎಂ.ಗೋವಿಂದರೆಡ್ಡಿ ಅವರನ್ನು ಮೆರವಣಿಗೆಯ ಮೂಲಕ ವೇದಿಕೆಗೆ ಕರೆತರಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ನಂತರ ಮಾತನಾಡಿದ ಸಚಿವ ನಾಗೇಶ್, ಜಿಲ್ಲೆಯಲ್ಲಿರುವ ನಿರುದ್ಯೋಗ ನಿವಾರಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಕೋಲಾರ ಚಿನ್ನದ ಗಣಿಯನ್ನ ಮತ್ತೆ ಪ್ರಾರಂಭ ಮಾಡುವುದು ಅಥವಾ ಅಲ್ಲಿನ ಯುವಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ವಚನಾನಂದ ಸ್ವಾಮೀಜಿ ಹೇಳಿಕೆಗೆ ಸಚಿವ ನಾಗೇಶ್ ಟಾಂಗ್ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯಕ್ಕೆ ಮಂತ್ರಿ ಸ್ಥಾನ ನೀಡಬೇಕೆಂದು ವೇದಿಕೆಯಲ್ಲಿ ವಚನಾನಂದ ಸ್ವಾಮೀಜಿ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿದರು. ಎಲ್ಲಾ ಸಮುದಾಯಕ್ಕೂ ಸ್ವಾಮೀಜಿಗಳು ಇರುವುದಿಲ್ಲ, ನಮ್ಮ ಸಮುದಾಯದ ಸ್ವಾಮೀಜಿಗಳು ಇದುವರೆಗೂ ಯಾವುದೇ ಡಿಮ್ಯಾಂಡ್ ಮಾಡಿಲ್ಲ, ಈ ರೀತಿಯಾಗಿ ಸ್ವಾಮೀಜಿಗಳು ಕೇಳುವುದು ಸಮಂಜಸವಲ್ಲ ಪ್ರತ್ಯೇಕವಾಗಿ ಬಂದು ಸಿಎಂಗೆ ಸಲಹೆ ಕೊಡಬೇಕಿತ್ತು. ಈ ರೀತಿ ವೇದಿಕೆಯಲ್ಲಿ ಕೇಳಿದ್ರೆ ಸಿಎಂ ಘನತೆ ಏನಾಗಬಹುದು, ಕೊಡಲೇ ಬೇಕು ಅಂತ ಖಡಾಖಂಡಿತವಾಗಿ ಕೇಳುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನೂ ನಮ್ಮ ಸಮುದಾಯದ ಶಾಸಕರಿಂದ ರಾಜೀನಾಮೆ ಕೊಡಿಸುತ್ತೇವೆ ಎಂದು ಬೆದರಿಕೆ ಹಾಕೋಕೆ ಬರಲ್ಲ, ಚುನಾವಣೆಯಲ್ಲಿ ಗೆಲ್ಲಿಸೋದು, ಸೋಲಿಸೋದು ಜನರಿಗೆ ಬಿಟ್ಟದ್ದೊ ಹೊರತು, ಬೇರೆ ಯಾರಿಗೂ ಅಲ್ಲ ಎಂದು ಸ್ವಾಮೀಜಿಗೆ ಟಾಂಗ್ ನೀಡಿದರು.