ಮಡಿಕೇರಿ(ಕೊಡಗು):ಹಿಜಾಬ್ ವಿವಾದದ ನಡುವೆ ಕೊಡಗಿನಲ್ಲಿ ಕೆಲ ಯುವಕರು ಮುಸ್ಲಿಂ ಹೆಣ್ಣು ಮಕ್ಕಳು ಧರಿಸುವ ಬುರ್ಖಾ ಹಾಕಿಕೊಂಡು ನೃತ್ಯ ಮಾಡಿರುವುದಕ್ಕೆ ಜಿಲ್ಲೆಯಲ್ಲಿ ಮುಸ್ಲಿಂ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕೊಳಕೇರಿ ಗ್ರಾಮದಲ್ಲಿ ಮೇ 28 ಮತ್ತು 29ರಂದು ಪಶ್ಚಿಮ ಕೊಳಕೇರಿ ಗ್ರಾಮಾಭಿವೃದ್ಧಿ ಸಂಘದ ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ಯುವಕರು ಈ ರೀತಿ ನೃತ್ಯ ಮಾಡಿದ್ದಾರೆ. ರಮೇಶ್ ಮುದ್ದಯ್ಯ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು ಎನ್ನಲಾಗ್ತಿದೆ.
ವೇದಿಕೆ ಕಾರ್ಯಕ್ರಮದಲ್ಲಿ ಕೆಲ ಯುವಕರು ಬುರ್ಖಾ ಹಾಕಿ ಕೊಡವ ವಾಲಗಕ್ಕೆ ನೃತ್ಯ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಜಿಲ್ಲೆಯ ಮುಸ್ಲಿಂ ಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಮುಸ್ಲಿಂ ಧಾರ್ಮಿಕ ಉಡುಪುಗಳಿಗೆ ಅಪಮಾನ ಮಾಡಲಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.