ಮಡಿಕೇರಿ: ಚಾರಣಕ್ಕೆ ತೆರಳಿದ್ದ ಹರಿಯಾಣ ಮೂಲದ ಯುವಕ ಹೃದಯಘಾತದಿಂದ ನಿಧನ ಮಡಿಕೇರಿ: ಚಾರಣಕ್ಕೆ ತೆರಳಿದ್ದ ಹರಿಯಾಣ ಮೂಲದ ಯುವಕ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಬಳಿಯ ಕಕ್ಕಬ್ಬೆ ತಡಿಯಂಡ ಮೋಳು ಬೆಟ್ಟದಲ್ಲಿ ನಡೆದಿದೆ. ಹರಿಯಾಣ ಮೂಲದ ಜತಿನ್ ಕುಮಾರ್ (25) ಮೃತ ದುರ್ದೈವಿ.
ಬೆಂಗಳೂರಿನ ಜೆಪಿ ನಗರದ ಕಂಪನಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಜತಿನ್ ಕುಮಾರ್ ತನ್ನ 5 ಜನ ಸಹೋದ್ಯೋಗಿಗಳ ಜೊತೆ ಭಾನುವಾರ ತಡಿಯಂಡ ಮೋಳು ಬೆಟ್ಟದ ವೀಕ್ಷಣೆಗೆ ತೆರಳಿದ್ದರು. ಬೆಟ್ಟದ ಮೇಲೆ ತಲುಪಿದಾಗ ತೀವ್ರತರದ ಎದೆನೋವು ಕಾಣಿಸಿಕೊಂಡಿದೆ. ಬಳಿಕ ಜತಿನ್ ಕುಮಾರ್ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್, ಅರಣ್ಯ ಇಲಾಖೆಯ ಅಧಿಕಾರಿ ಸುರೇಶ್ ಹಾಗೂ ಸಿಬ್ಬಂದಿ ತೆರಳಿ ಕಾಡು ಮುಳ್ಳುಗಳಿಂದ ಕೂಡಿದ್ದ ಕಚ್ಚಾರಸ್ತೆಯಲ್ಲಿ ಹರಸಾಹಸಪಟ್ಟು ಬೆಟ್ಟದ ಮೇಲಿಂದ ಮೃತದೇಹವನ್ನು ಕೆಳಗೆ ತಂದಿದ್ದಾರೆ. ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮಡಿಕೇರಿ ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಮೃತಯುವಕನ ಕುಟುಂಬಸ್ಥರು ಬಂದ ಬಳಿಕ ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.
ಇದನ್ನೂ ಓದಿ:ಚಿಕ್ಕಮಗಳೂರು: ಶಾಲೆಗೆ ಹೋಗುವಾಗ ಹೃದಯಾಘಾತದಿಂದ 7ನೇ ತರಗತಿ ವಿದ್ಯಾರ್ಥಿನಿ ಸಾವು
ಇತ್ತೀಚೆಗೆ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಇದಕ್ಕೆ ಕಾರಣ ಏನು ಎಂಬುದರ ಬಗ್ಗೆ ವೈದ್ಯರು, ತಜ್ಞರು ನಿರಂತರ ಅಧ್ಯಯನ ಮಾಡುತ್ತಲೇ ಇದ್ದಾರೆ. ಆದರೆ ಇತ್ತೀಚೆಗೆ ಇಂತಹ ಪ್ರಕರಣಗಳು ವರದಿಯಾಗುತ್ತಲೇ ಇವೆ.
ಆಟ ಆಡುತ್ತಿರುವಾಗಲೇ ಕುಸಿದು ಬಿದ್ದು ಕ್ರಿಕೆಟರ್ ಸಾವು( ಉತ್ತರಪ್ರದೇಶ): ಕ್ರಿಕೆಟ್ ಆಡುತ್ತಿದ್ದ ವೇಳೆ 36 ವರ್ಷದ ಯುವಕನೊಬ್ಬ ಏಕಾಏಕಿ ಕ್ರೀಸ್‌ನಲ್ಲಿ ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಮೀರತ್‌ನ ಗಾಂಧಿ ಬಾಗ್ ಮೈದಾನದಲ್ಲಿ ನಡೆದಿದೆ. ಯುವಕ ಬ್ಯಾಟಿಂಗ್ ಮಾಡುತ್ತಿದ್ದಾಗ ಎದೆನೋವು ಕಾಣಿಸಿಕೊಂಡಿತ್ತು. ಅವರು 15 ನಿಮಿಷಗಳ ಕಾಲ ವಿರಾಮ ತೆಗೆದುಕೊಂಡು ಮತ್ತೆ ಬ್ಯಾಟಿಂಗ್ ಮಾಡಲು ಬಂದಾಗ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಭಾನುವಾರ ಮೀರತ್‌ನ ಗಾಂಧಿ ಬಾಗ್ ಮೈದಾನದಲ್ಲಿ ಕ್ರಿಕೆಟ್ ಪಂದ್ಯ ನಡೆಯುತ್ತಿತ್ತು. ಓಲ್ಡ್ ಗನ್ ವರ್ಸಸ್ ಬ್ಲಾಸ್ಟ್ ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿತ್ತು. ಟಾಸ್ ಗೆದ್ದ ಓಲ್ಡ್ ಗನ್ ತಂಡಕ್ಕೆ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿತು. ಇಂದಿರಾನಗರದ ಮಾಧವಪುರಂ ನಿವಾಸಿ ದುಷ್ಯಂತ್ ಶರ್ಮಾ ಓಲ್ಡ್ ಗನ್ ತಂಡ ಆರಂಭಿಕರಾಗಿ ಮೈದಾನಕ್ಕೆ ಬಂದಿದ್ದರು. ದುಷ್ಯಂತ್ 4.2 ಓವರ್ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿತು. ಆಗ ಅವರು ಬ್ಯಾಟಿಂಗ್ ಅನ್ನು ಅರ್ಧಕ್ಕೆ ಮೊಟುಕುಗೊಳಿಸಿ ವಿಶ್ರಾಂತಿಗಾಗಿ ಮೈದಾನದಿಂದ ಹೊರ ಬಂದರು. ಸಹ ಆಟಗಾರರು ದುಷ್ಯಂತ್ ಶರ್ಮಾ ಅವರನ್ನು ವೈದ್ಯರ ಬಳಿಗೆ ಹೋಗುವಂತೆ ಕೇಳಿದರು. ಆದರೆ ಅವರು ‘ಬೇಡ, ನಾನು ಚೆನ್ನಾಗಿದ್ದೇನೆ’ ಎಂದು ಹೇಳಿದ್ದರು. ಸುಮಾರು 15 ನಿಮಿಷಗಳ ವಿಶ್ರಾಂತಿಯ ನಂತರ ದುಷ್ಯಂತ್ ಮತ್ತೆ ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಮರಳಿದ್ದರು. ಅವರು ಚೆನ್ನಾಗಿಯೇ ಬ್ಯಾಟಿಂಗ್ ಮಾಡುತ್ತಿದ್ದರು. 7ನೇ ಓವರ್ ಆಡುವಾಗ ಅವರ ಸ್ಥಿತಿ ಹದಗೆಟ್ಟಿದ್ದು, ಇದ್ದಕ್ಕಿದ್ದಂತೆ ಕ್ರೀಸ್‌ನಲ್ಲಿ ಕುಸಿದು ಬಿದ್ದರು. ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಬದುಕುಳಿಯಲಿಲ್ಲ.