ಕುಶಾಲನಗರ(ಕೊಡಗು) :ಕ್ರಿಕೆಟ್ ಆಡಿಕೊಂಡು ವಾಪಸ್ ಬೈಕ್ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿಗೆ ಯುವಕನೊಬ್ಬ ಬಲಿಯಾಗಿದ್ದು, ಮತ್ತೊಬ್ಬ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಜಿಲ್ಲೆಯ ಕುಶಾಲನಗರ ತಾಲೂಕಿನ ಅರೆಕಾಡು ಗ್ರಾಮದ ಬಳಿ ಶುಕ್ರವಾರ ಸಾಯಂಕಾಲ ಈ ಘಟನೆ ನಡೆದಿದೆ.
ಯುವಕರು ಕುಶಾಲನಗರ ತಾಲೂಕಿನ ನೆಲ್ಲಿಹುದಿಕೇರಿ ನಿವಾಸಿಗಳಾಗಿದ್ದಾರೆ. ಇವರು ಎಂದಿನಂತೆ ದ್ವಿಚಕ್ರ ವಾಹನದಲ್ಲಿ ಪಕ್ಕದ ಅರೆಕಾಡು ಗ್ರಾಮಕ್ಕೆ ತೆರಳಿ ಸಂಜೆ ಮನೆಗೆ ವಾಪಸ್ಸಾಗುತ್ತಿದ್ದಾಗ ಕಾಡಾನೆ ದಾಳಿ ನಡೆಸಿದೆ. ಗಂಭೀರವಾಗಿ ಗಾಯಗೊಂಡಿದ್ದ ಯುವಕ ಮೊಹಮ್ಮದ್ ಆಸಿಕ್ (19) ಮಡಿಕೇರಿ ಜಿಲ್ಲಾಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾನೆ.
ಜೊತೆಗಿದ್ದ ಮತ್ತೊಬ್ಬ ಯುವಕ ಆಸ್ಮಿಲ್ ಕೈ ಮುರಿದಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಸುಮಾರು ಯುವಕರು ಒಟ್ಟಿಗೆ ತಮ್ಮ ತಮ್ಮ ವಾಹನದಲ್ಲಿ ವಾಪಸ್ಸಾಗುತ್ತಿದ್ದಾಗ, ಆಸಿಕ್ ಬೈಕ್ ಮೇಲೆ ಕಾಡಾನೆ ದಾಳಿ ನಡೆಸಿದೆ. ನೆಲಕ್ಕೆ ಬಿದ್ದ ಆತನ ಎದೆಭಾಗಕ್ಕೆ ಆನೆ ಸೊಂಡಿಲಿಂದ ಹೊಡೆದ ರಭಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದ. ಜೊತೆಯಲ್ಲಿದ್ದ ಇತರರು ಬೊಬ್ಬೆ ಹಾಕಿದಾಗ ಆನೆ ಸ್ಥಳದಿಂದ ಕಾಲ್ಕಿತ್ತಿದೆ.
ಘಟನೆಯಿಂದ ನೆಲ್ಲಿಹುದಿಕೇರಿ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮನೆ ಮಾಡಿದೆ. ಆನೆ ಹಾವಳಿ ತಪ್ಪಿಸಲು ಸರ್ಕಾರವು ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿ ಆಗ್ರಹಿಸಿದ್ದಾರೆ. ಸುಮಾರು 20 ಆನೆಗಳಿರುವ ಹಿಂಡು ಕಳೆದ ಕೆಲವು ದಿನಗಳಿಂದ ಇಲ್ಲಿಯ ಕಾಫಿತೋಟದಲ್ಲಿ ಬೀಡು ಬಿಟ್ಟಿದ್ದು, ಸಮಸ್ಯೆ ಉಂಟು ಮಾಡುತ್ತಿವೆ.
ಇದನ್ನೂ ಓದಿ:ಕಸಾಯಿಖಾನೆ ಪಾಲಾಗ್ತಿದ್ದ ಗೋವುಗಳಿಗೆ ಆಶ್ರಯ.. ಕಾಮಧೇನು ರಕ್ಷಕ ಕಾಫಿನಾಡಿನ ಈ ಭಗವಾನ್