ಕೊಡಗು(ತಲಕಾವೇರಿ): ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರವಾದ ತಲಕಾವೇರಿಯಲ್ಲಿ ಎಂಟು ದಿನಗಳ ಬಳಿಕ ಪೂಜಾ ಕೈಂಕರ್ಯಗಳು ಆರಂಭವಾಗಿವೆ.
ತಲಕಾವೇರಿಯಲ್ಲಿ ಬ್ರಹ್ಮಗಿರಿ ಬೆಟ್ಟ ಕುಸಿದು ಇಲ್ಲಿನ ಪ್ರಧಾನ ಅರ್ಚಕರ ಕುಟುಂಬದ ಐವರು ಕಣ್ಮರೆಯಾಗಿದ್ದ ಹಿನ್ನೆಲೆಯಲ್ಲಿ ಎಂಟು ದಿನಗಳಿಂದ ಪೂಜಾ ಕೈಂಕರ್ಯ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದವು. ನಿನ್ನೆಯಷ್ಟೇ ಸಮಿತಿಯವರು ದೇವಾಲಯ ಆವರಣ ಶುದ್ಧಗೊಳಿಸಿದ್ದರು.
ತಲಕಾವೇರಿಯಲ್ಲಿ ನೆರವೇರುತ್ತಿವೆ ಪೂಜಾ ಕೈಂಕರ್ಯಗಳು ಇಂದು ಬೆಳಗ್ಗೆ ಕಾಸರಗೋಡು ಮೂಲದ ನೀಲೇಶ್ವರ ಪದ್ಮನಾಭ ತಂತ್ರಿಯವರ ತಂಡ ಕಾವೇರಿ ಉಗಮಿಸುವ
ಬ್ರಹ್ಮಕುಂಡಿಕೆಯ ತೀರ್ಥದಿಂದ ಅಗಸ್ತೇಶ್ವರ, ಗಣಪತಿ ಮೂರ್ತಿಗಳನ್ನು ಶುದ್ಧೀಕರಣಗೊಳಿಸಿ ಪೂಜೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ತಲಕಾವೇರಿಯ ಇತಿಹಾಸದಲ್ಲೇ ಮೊದಲ ಬಾರಿಗೆ ಪೂಜಾ ಕೈಂಕರ್ಯಗಳು ಸ್ಥಗಿತಗೊಂಡಿದ್ದವು. ಶಾಸಕ ಕೆ.ಜಿ.ಬೋಪಯ್ಯ, ದೇವಾಲಯದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಬಿ.ಎಸ್.ತಮ್ಮಯ್ಯ ಹಾಗೂ ಸ್ಥಳೀಯ ಭಕ್ತರ ಸಮ್ಮುಖದಲ್ಲಿ ಎಂಟು ದಿನಗಳ ಬಳಿಕ ಮತ್ತೆ ಪೂಜಾ ವಿಧಿ ವಿಧಾನಗಳು ಪ್ರಾರಂಭವಾಗುತ್ತಿವೆ.