ಕೊಡಗು : ಪ್ರೇಯಸಿ ಮತ್ತೊಬ್ಬನನ್ನು ಮದುವೆಯಾಗಿದ್ದನ್ನು ಸಹಿಸಲಾಗದೇ ಪ್ರಿಯಕರ ಯುವತಿಗೆ ಕಾಟ ಕೊಟ್ಟಿದ್ದು, ಹಳೇ ಲವರ್ ಕಾಟದಿಂದ ಬೇಸತ್ತ ವಿವಾಹಿತ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹಳೇ ಲವರ್ ಕಾಟ: ಡೆತ್ ನೋಟ್ ಬರೆದಿಟ್ಟು ಯುವತಿ ಆತ್ಮಹತ್ಯೆ - kannadanews
ಮಾಜಿ ಲವರ್ ಕಾಟ ತಡೆಯಲಾಗದೇ ವಿವಾಹಿತ ಮಹಿಳೆಯೊಬ್ಬಳು ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.
![ಹಳೇ ಲವರ್ ಕಾಟ: ಡೆತ್ ನೋಟ್ ಬರೆದಿಟ್ಟು ಯುವತಿ ಆತ್ಮಹತ್ಯೆ](https://etvbharatimages.akamaized.net/etvbharat/prod-images/768-512-3662646-thumbnail-3x2-surya.jpeg)
ಮಡಿಕೇರಿಯ ಡೇರಿ ಫಾರ್ಮ್ ನಿವಾಸಿ ಹರೀಶ್ ಎಂಬುವರ ಮಗಳು ದಿವ್ಯಜ್ಯೋತಿ ಈ ರೀತಿ ಆತ್ಮಹತ್ಯೆಗೆ ಶರಣಾದ ಯುವತಿ. ಕಳೆದ ಎರಡು ವರ್ಷಗಳ ಹಿಂದೆ ಈಕೆ ಪವನ್ ಎಂಬಾತನನ್ನು ಪ್ರೀತಿಸಿ ಆತನೊಂದಿಗೆ ಬೆಂಗಳೂರು ಸೇರಿದ್ದಳು. ಬಳಿಕ ಮನೆಯವರ ಒತ್ತಾಯಕ್ಕೆ ವಾಪಾಸ್ ಮಡಿಕೇರಿಗೆ ಬಂದು ನೆಲೆಸಿದ್ದಳು. ಆದರೆ ಬೆಂಗಳೂರಿನಿಂದ ವಾಪಾಸ್ ಬಂದ ದಿವ್ಯಜ್ಯೋತಿ ಮತ್ತು ಪವನ್ ನಡುವಿನ ಪ್ರೀತಿ ಬ್ರೇಕಪ್ ಆಗಿತ್ತಂತೆ. ಇದಾದ ಬಳಿಕ ಆಕೆ ಬ್ರಿಜೇಶ್ ಎಂಬಾತನ ಜೊತೆಗೆ ಗುಟ್ಟಾಗಿ ಮದುವೆಯಾಗಿದ್ದಳಂತೆ. ಇದನ್ನ ತಿಳಿದ ಮಾಜಿ ಪ್ರಿಯಕರ ಪವನ್ ಕಾಟ ಕೊಡುತ್ತಿದ್ದನಂತೆ. ಅವನ ಕಾಟಕ್ಕೆ ಮನನೊಂದು ದಿವ್ಯಜ್ಯೋತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಯುವತಿಯ ಸಂಬಂಧಿ ತಿಳಿಸಿದ್ದಾರೆ.
ಪ್ರೇಯಸಿ ಗುಟ್ಟಾಗಿ ಮದುವೆಯಾಗಿದ್ದಕ್ಕೆ ಆಕ್ರೋಶ ಹೊರಹಾಕಿದ್ದ ಪವನ್ ನಿಮ್ಮನ್ನ ನೆಮ್ಮದಿಯಾಗಿ ಬದುಕೋಕೆ ಬಿಡೋದಿಲ್ಲಾ ಅಂತ ಧಮ್ಕಿ ಹಾಕಿ, ಪ್ರತಿನಿತ್ಯ ಕರೆ , ಮೆಸೇಜ್ ಮಾಡಿ ಟಾರ್ಚರ್ ಮಾಡ್ತಿದ್ದನಂತೆ. ಇದರಿಂದ ನೆಮ್ಮದಿ ಕಳೆದುಕೊಂಡ ದಿವ್ಯಜ್ಯೋತಿ ಮನೆಯಲ್ಲಿ ಡೆತ್ನೋಟ್ ಬರೆದಿಟ್ಟು ನೇಣಿಗೆ ಕೊರಳೊಡ್ಡಿದ್ದಾಳೆ ಎನ್ನುತ್ತಾರೆ ದಿವ್ಯಜ್ಯೋತಿ ತಂದೆ ಹರೀಶ್. ಈ ಸಂಬಂಧ ಈಗಾಗಲೇ ಪವನ್ ಹಾಗೂ ಬ್ರಿಜೇಶ್ ಇಬ್ಬರನ್ನೂ ಮಡಿಕೇರಿ ನಗರ ಪೊಲೀಸರು ವಶಕ್ಕೆ ಪಡೆದಿದ್ದು,ವಿಚಾರಣೆ ನಡೆಸಿದ್ದಾರೆ.