ಕೊಡಗು:ಚಾಕುವಿನಿಂದ ಇರಿದು ಮಹಿಳೆಯೋರ್ವಳನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಇಗ್ಗೋಡ್ಲು ಗ್ರಾಮದಲ್ಲಿ ನಡೆದಿದೆ. ಮಾದಾಪುರ ನಿವಾಸಿ ತಾಹಿರಾ(38) ಕೊಲೆಯಾದ ಮಹಿಳೆ. ಇದೇ ಗ್ರಾಮದ ಪಕ್ಕದ ಬೀದಿಯಲ್ಲಿ ವಾಸವಾಗಿದ್ದ ಪೂವಯ್ಯ ಹತ್ಯೆಗೈದ ಆರೋಪಿ.
ತಾಹಿರಾ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿದ ಆರೋಪಿ ಮನೆಯ ಅಡುಗೆ ಕೋಣೆಯಲ್ಲೆ ಹತ್ಯೆ ಮಾಡಿದ್ದಾನೆ. ನಂತರ ಹೆಂಡತಿಗೆ ಕರೆ ಮಾಡಿ ನಾನು ಕೊಲೆ ಮಾಡಿದ್ದೇನೆ. ನೀನು ಮನೆಗೆ ಬಾ ಎಂದು ಹೇಳಿದ್ದಾನೆ. ಹೆಂಡತಿ ಮನೆಗೆ ಬರುವುದರೊಳಗೆ ಆರೋಪಿ ನೇರವಾಗಿ ಮಾದಪುರ ಉಪಠಾಣೆಗೆ ಹೋಗಿ ನಡೆದ ಘಟನೆ ಹೇಳಿ ಚಾಕು ಸಮೇತ ಶರಣಗಾಗಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಯ್ಯಪ್ಪ ಮಾಹಿತಿ ನೀಡಿದ್ದಾರೆ.
ಚಾಕುವಿನಿಂದ ಇರಿದು ಮಹಿಳೆಯ ಬರ್ಬರ ಹತ್ಯೆ.. ಇಬ್ಬರಿಗೂ ಹಲವು ವರ್ಷಗಳಿಂದ ಅನೈತಿಕ ಸಂಬಂಧ ಇರುವುದಾಗಿ ಪೊಲೀಸ್ ತನಿಖೆ ನಂತರ ಮೇಲ್ನೋಟಕ್ಕೆ ತಿಳಿದು ಬಂದಿದೆ. ಮೊದಲಿನಿಂದಲೂ ತಾಹಿರಾ ಮನೆಗೆ ಪೂವಯ್ಯ ಬಂದು ಹೋಗಿ ಮಾಡುತ್ತಿದ್ದನಂತೆ. ಇಂದು ಮುಂಜಾನೆ ಮನೆಗೆ ಬಂದ ಸಂದರ್ಭದಲ್ಲಿ ಇಬ್ಬರ ನಡುವೆ ಗಲಾಟೆ ನಡೆದಿದೆ. ಬಳಿಕ ಮನೆಯಿಂದ ಹೋಗಿ ಸ್ವಲ್ಪ ಸಮಯ ಬಿಟ್ಟು ಮತ್ತೆ ತಾಹಿರಾ ಮನೆಗೆ ಬಂದಿದ್ದು, ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ ಎನ್ನಲಾಗ್ತಿದೆ.
ತಾಯಿಯ ಕೂಗಾಟ ಕೇಳಿ ಮನೆಗೆ ಬಂದ ಮಗ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನ ನೋಡಿ ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ರಸ್ತೆ ಮಧ್ಯ ತಾಹಿರಾ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ. ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮೃತ ತಾಹಿರಾಗೆ ಇಬ್ಬರು ಮಕ್ಕಳಿದ್ದು, ತಾಯಿ ಅಗಲಿಕೆಯಿಂದ ಇಬ್ಬರು ಮಕ್ಕಳು ತಬ್ಬಲಿಗಳಾಗಿದ್ದಾರೆ.
ಇದನ್ನೂ ಓದಿ:ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಶಿಕ್ಷಕನಿಗೆ 20 ವರ್ಷ ಜೈಲು ಶಿಕ್ಷೆ