ಕರ್ನಾಟಕ

karnataka

ETV Bharat / state

'ದುಬಾರೆ ಆನೆ ಶಿಬಿರ'ದಲ್ಲಿ ಮೂರು ಕಾಡಾನೆಗಳಿಗೆ ತರಬೇತಿ: ಆರು ತಿಂಗಳಲ್ಲಿ ಸಾಕಾನೆಗಳಾಗಿ ಪರಿವರ್ತನೆ

ಪ್ರವಾಸಿ ತಾಣವಾದ ದುಬಾರಿ ಆನೆ ಶಿಬಿರದಲ್ಲಿ ಮೂರು ಕಾಡಾನೆಗಳನ್ನು ಪಳಗಿಸಲಾಗುತ್ತಿದೆ. ಒಂದೊಂದು ಅನೆಯನ್ನು ಒಂಟಿಯಾಗಿ ಕ್ರಾಲ್​ನಲ್ಲಿ ಕೂಡಿ ಹಾಕಿ ಹಂತಹಂತವಾಗಿ ಸಾಕಾನೆಗಳಾಗಿ ಪರಿವರ್ತಿಸಲಾಗುತ್ತಿದೆ.

Dubare Elephant Camp
'ದುಬಾರೆ ಆನೆ ಶಿಬಿರ'

By

Published : Feb 9, 2023, 3:51 PM IST

Updated : Feb 9, 2023, 6:01 PM IST

'ದುಬಾರೆ ಆನೆ ಶಿಬಿರ'ದಲ್ಲಿ ಮೂರು ಕಾಡಾನೆಗಳಿಗೆ ತರಬೇತಿ

ಕೊಡಗು:ಸಾಕಾನೆ ಶಿಬಿರವಾಗಿದ್ದ 'ದುಬಾರೆ ಆನೆ ಶಿಬಿರ' ಇದೀಗ ಕಾಡಾನೆಗಳನ್ನ ಸಾಕಾನೆಗಳಾಗಿ ಪರಿವರ್ತಿಸುವ ಕ್ಲಿನಿಕ್ ಆಗಿದೆ. ಜನರ ಜೀವವನ್ನು ತೆಗೆಯುವುದಲ್ಲದೇ, ಬೆಳೆಗಳನ್ನು ನಾಶಪಡಿಸಿ ಕಾಡಿನಲ್ಲಿ ಪುಂಡಾಟವಾಡುತ್ತಿದ್ದ 3 ಕಾಡಾನೆಗಳನ್ನು ಹಿಡಿದು ದುಬಾರೆಯಲ್ಲಿ ಪಳಗಿಸಲಾಗುತ್ತಿದೆ. ಸುತ್ತಲೂ ಜೈಲಿನ ಸರಳಿನಂತಿರೋ ದಪ್ಪದ ಮರದ ದಿಮ್ಮಿಗಳಿಂದ ನಿರ್ಮಾಣ ಮಾಡಿರುವ ಮೂರು ಕ್ರಾಲ್​ನಲ್ಲಿ ಒಂದೊಂದು ಕಾಡಾನೆಗಳನ್ನು ಒಂಟಿಯಾಗಿ ಕೂಡಿಹಾಕಿ ಹಂತ ಹಂತವಾಗಿ ಸಾಕಾನೆಗಳಾಗಿ ಪರಿವರ್ತನೆ ಮಾಡಲಾಗುತ್ತಿದೆ.

ಆನೆಗಳಿಗೂ ಜೈಲು ವಾಸ : ಮೈಸೂರಿನಲ್ಲಿ ಮಹಿಳೆಯನ್ನು ಕೊಂದು ಹಾಕಿದ್ದ ಕಾಡಾನೆ, ಇತ್ತೀಚೆಗೆ ಸಿದ್ಧಪುರ ಭಾಗದಲ್ಲಿ ಹಿಡಿದಿದ್ದ ಆನೆ ಮತ್ತು ಹಾಸನ ಜಿಲ್ಲೆಯಲ್ಲಿ ದಾಂಧಲೆ ಮಾಡಿ ಮನುಷ್ಯರ ಪ್ರಾಣ ತೆಗೆದ ಮೂರು ಆನೆಗಳನ್ನು ಒಟ್ಟಿಗೆ ಪಳಗಿಸಲಾಗುತ್ತಿದೆ. ಕೊಡಗು ಜಿಲ್ಲೆಯ ಸೋಮವಾರ ಪೇಟೆ ತಾಲೂಕಿನ ದುಬಾರೆ ಸಾಕಾನೆ ಶಿಬಿರದಲ್ಲಿ ಈ ಆನೆಗಳನ್ನು ಸೆರೆ ಹಿಡಿಯಲಾಗಿದೆ. ತಪ್ಪು ಮಾಡಿದ ಖೈದಿಗಳನ್ನು ಹೇಗೆ ಜೈಲಿನಲ್ಲಿ ಹಾಕುತ್ತಾರೋ ಹಾಗೆಯೇ ಜನರ ಪ್ರಾಣಕ್ಕೆ ಕುತ್ತು ತಂದ ಆನೆಗಳನ್ನು ಬಂಧನದಲ್ಲಿಡಲಾಗಿದೆ.

ಮತ್ತಿಗೊಡು ಸಾಕಾನೆ ಶಿಬಿರ ಮೊದಲು ಸ್ಥಾಪನೆಯಾದ ಕಾಡಾನೆಗಳ ತರಬೇತಿ ಕೇಂದ್ರವಾಗಿದೆ. ಇದೀಗ ಪ್ರಮುಖ ಪ್ರವಾಸಿ ತಾಣವಾದ ದುಬಾರೆ ಅನೆ ಶಿಬಿರವು ಅದರ ಸಾಲಿಗೆ ಸೇರಿಕೊಂಡಿದೆ. ಹತ್ತು ಸಾಕಾನೆಗಳಿಗೆ ಸಮನಾಗಿರೋ ಒಂದು ಕಾಡಾನೆಯನ್ನು ಪಳಗಿಸೋದು ಸುಲಭದ ಮಾತಲ್ಲ. ಅದಕ್ಕಾಗಿಯೇ ಸಾಕಷ್ಟು ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದ್ದು ಆನೆಗಳನ್ನು ಮಾವುತರು, ಕವಾಡಿಗಳು ಪಳಗಿಸುತ್ತಾರೆ. ಆನೆಗಳು ಈ ಬಂಧಿಖಾನೆಯಿಂದ ತಪ್ಪಿಸಿಕೊಳ್ಳಲು ಹಲವು ಬಾರಿ ಪ್ರಯತ್ನ ಪಟ್ಟು ಸೋತಿದೆ. ಕಾಡಾನೆಗಳನ್ನು ಹಿಡಿದು ನಾಡಿನಲ್ಲಿ ಪಳಗಿಸುವ ಕಾರ್ಯಕ್ಕೆ ಆರಣ್ಯ ಇಲಾಖೆ ಮುಂದಾಗಿದ್ದು, ಆನೆಗಳನ್ನು ಆರು ತಿಂಗಳ ಕಾಲ ಕ್ರಾಲ್‍ನಲ್ಲಿ ಇಟ್ಟು ಹಂತ ಹಂತವಾಗಿ ಒಂದು ಹಂತಕ್ಕೆ ತರಲಾಗುತ್ತಿದೆ.

ಇದನ್ನೂ ಓದಿ:ಒಂಟಿ ಸಲಗದ ರಿಟರ್ನ್ ಸವಾರಿ: ತೊಂದರೆ ಕೊಡಲ್ಲ, ಆದರೂ ಎಚ್ಚರಿಕೆ ಇರಲಿ

ಕಾಡಾನೆಗಳನ್ನು ಪಳಗಿಸುವುದು ಹೀಗೆ: ಜೈಲಿನಂತೆ ಮರದ ದಿಮ್ಮಿಗಳು ಚೌಕಾಕಾರದಲ್ಲಿ ಇರುವುದಕ್ಕೆ ಕ್ರಾಲ್​ ಎಂದು ಕರೆಯುತ್ತಾರೆ. ಗಲಾಟೆ ಮಾಡುವ ಆನೆಗಳನ್ನು ಅಥವಾ ಕಾಡಾನೆಗಳನ್ನು ಪಳಗಿಸಲು ಈ ಕ್ರಾಲ್​ ಅನ್ನು ಬಳಸಲಾಗುತ್ತದೆ. ಇಲ್ಲಿರುವ ಮೂರು ಕಾಡಾನೆಗಳಲ್ಲಿ 2 ಗಂಡಾನೆ ಮತ್ತು 1 ಹೆಣ್ಣಾನೆ ಇದೆ. ಇವುಗಳನ್ನು ಸುಮಾರು ಆರು ತಿಂಗಳ ಕಾಲ ಈ ಕ್ರಾಲ್‍ನಲ್ಲಿಯೇ ಇಟ್ಟು, ಮಿತವಾದ ಆಹಾರ ನೀಡಲಾಗುತ್ತದೆ. ಯಾವುದೇ ಕಾರಣಕ್ಕೂ ಕ್ರಾಲ್​ನಿಂದ ಆನೆಗಳನ್ನು ಹೊರಗೆ ಬಿಡಲಾಗುವುದಿಲ್ಲ. ಪ್ರತಿ ದಿನ 10 ಕೆ.ಜಿ ಭತ್ತ, 10 ಕಂತೆ ನೆಲ್ಲುಲ್ಲು, 250 ಗ್ರಾಂ. ಬೆಲ್ಲ, 2 ಕಂತೆ ಸೊಪ್ಪು, ನೀರು ಹಾಗೂ 2 ಕಟ್ಟು ಕಬ್ಬನ್ನು ನೀಡಲಾಗುತ್ತಿದೆ.

ಇನ್ನು ಆನೆಗಳು ಘೀಳಿಡುತ್ತಾ ಗಲಾಟೆ ಮಾಡಿದ್ದಲ್ಲಿ, ಅಂಕುಶದಂತಿರೋ ಮರದ ಉದ್ದನೆಯ ಕೋಲನ್ನು ಹಿಡಿದು ಹೆದರಿಸುತ್ತಾರೆ. ಪಳಗಿಸುವ ಸಂದರ್ಭದಲ್ಲಿ ಆನೆಗಳಿಗೆ ಗಾಯಗಳಾದರೇ, ನೀಮ್ ಆಯಿಲ್ ಮತ್ತು ಕ್ಯಾಸ್ಟ್ರಾ ಆಯಿಲ್‍ನ್ನು ಹಚ್ಚಲಾಗುತ್ತದೆ. ಈ ಆನೆಗಳನ್ನು 24 ಗಂಟೆಗಳ ಕಾಲ ನೋಡಿಕೊಳ್ಳಲು ಒಬ್ಬ ಮಾವುತ ಹಾಗೂ ಒಬ್ಬ ಕವಾಡಿಯನ್ನು ನೇಮಿಸಲಾಗಿದೆ. ಅವರು ಆನೆಗಳ ಜೊತೆ ಮಾತನಾಡುತ್ತಾ ಅವುಗಳಿಗೆ ಭಾಷೆ ಅರ್ಥ ಮಾಡಿಸುತ್ತಿದ್ದಾರೆ. ಮುಂದೆ ಹೋಗು, ಹಿಂದೆ ಹೋಗು, ಮರದ ದಿಮ್ಮಿ ಎತ್ತು, ಊಟಮಾಡು, ನಮಸ್ಕಾರ ಮಾಡು ಈ ರೀತಿಯಾಗಿ ಹೇಳಿಕೊಡಲಾಗುತ್ತಿದೆ. ಜನರ ಜೀವ ಕಿತ್ತುಕೊಂಡ ಈ ಆನೆಗಳನ್ನು ಪಳಗಿಸುತ್ತಿರುವುದು ಸೋಜಿಗವೇ ಸರಿ.

ದುಬಾರೆ ಸಾಕಾನೆ ಶಿಬಿರದಲ್ಲಿ ಒಟ್ಟು 28 ಆನೆಗಳಿದ್ದು, ಮೂರು ಆನೆಮರಿಗಳಿವೆ. ಪ್ರತಿ ಆನೆಗೂ ಒಬ್ಬ ಮಾವುತ ಮತ್ತು ಕವಾಡಿಯನ್ನು ನೇಮಕ ಮಾಡಿರುತ್ತಾರೆ. ಸುತ್ತಮುತ್ತಲಿನ ನಾಲ್ಕೈದು ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗಿನ ಮತ್ತಿಗೋಡು ಮತ್ತು ದುಬಾರೆ ಸಾಕಾನೆ ಶಿಬಿರದಲ್ಲಿ ಮಾತ್ರ ಕಾಡಾನೆಗಳನ್ನೂ ಪಳಗಿಸಲಾಗುತ್ತದೆ. ಅಲ್ಲದೇ ಮಗುವಿಗೆ ಮಾತು ಕಲಿಸುವ ರೀತಿಯಲ್ಲೇ ಮಾವುತ ಮತ್ತು ಕವಾಡಿಗಳು ಆನೆಗಳಿಗೆ ತಮ್ಮದೇ ಭಾಷೆಯನ್ನು ಹೇಳಿಕೊಡುತ್ತಾರೆ. ಈ ಆನೆಗಳನ್ನು ನೋಡುವುದಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಆರು ತಿಂಗಳು ಪೂರ್ಣ ಪ್ರಮಾಣದಲ್ಲಿ ಪಳಗಿದ ನಂತರ ಮೂರು ಕಾಡಾನೆಗಳನ್ನು ಎಲ್ಲಿ ಬಿಡಬೇಕು ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ತೀರ್ಮಾನಿಸಲಿದ್ದಾರೆ.

ಇದನ್ನೂ ಓದಿ:ಆನೆ ಟಾಸ್ಕ್ ಫೋರ್ಸ್ ರಚನೆ : ಬೇಕಿದೆ ಅಧಿಕಾರಿಗಳ ನೇಮಕ

Last Updated : Feb 9, 2023, 6:01 PM IST

ABOUT THE AUTHOR

...view details