ಕೊಡಗು: ಕಾಡಾನೆ ದಾಳಿಗೆ ಕಾರ್ಮಿಕ ಬಲಿಯಾಗಿರುವ ಘಟನೆ ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ವಾಲ್ನೂರು ಗ್ರಾಮದ ಅಮಂಗಾಲದಲ್ಲಿ ನಡೆದಿದೆ.
ಅಮಂಗಾಲ ಗ್ರಾಮದ ನಿವಾಸಿ ಏಳುಮಲೈ (42) ಮೃತ ವ್ಯಕ್ತಿ. ಮನೆಯ ಪಕ್ಕದಲ್ಲಿ ಬೆಳಗ್ಗೆ ಬಹಿರ್ದೆಸೆಗೆ ತೆರಳಿದ್ದಾಗ ಆನೆ ದಾಳಿ ಮಾಡಿದೆ. ದಾಳಿ ವೇಳೆ ಕಿರುಚಾಡಿದರು ಯಾರೂ ಸಹ ಈತನ ಸಹಾಯಕ್ಕೆ ಬಂದಿಲ್ಲ. ಆಗ ಆನೆ ದಂತದಿಂದ ತಿವಿದು ಈತನನ್ನು ಸಾಯಿಸಿದೆ.
ಕೆಲವು ದಿನಗಳ ಹಿಂದಷ್ಟೇ ಸಿದ್ದಾಪುರ ಭಾಗದಲ್ಲಿ ಆನೆ ದಾಳಿಮಾಡಿ ಮೂವರ ಪ್ರಾಣವನ್ನು ತೆಗೆದಿತ್ತು. ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದರು. ಈಗ ಸೋಮವಾರಪೇಟೆ ಭಾಗದಲ್ಲಿ ಒಂಟಿ ಸಲಗ ದಾಳಿಮಾಡಿ ವ್ಯಕ್ತಿಯನ್ನು ಕೊಂದಿದ್ದು ಜನರಲ್ಲಿ ಆತಂಕ ಮೂಡಿಸಿದೆ. ಸ್ಥಳಕ್ಕೆ ಆರಣ್ಯ ಇಲಾಖೆಯ ಆಧಿಕಾರಿಗಳು ಬಂದಿದ್ದು, ಆನೆಯನ್ನು ಕಾಡಿಗೆ ಓಡಿಸಲು ಪ್ರಯತ್ನಿಸುತ್ತಿದ್ದಾರೆ.
ಕಾಡಾನೆಗಳ ನಿರಂತ ದಾಳಿ:
ಕಾಡಾನೆಗಳ ಗುಂಪು ರೈತರ ಫಸಲು ನಾಶ ಮಾಡುವುದಲ್ಲದೆ, ಕಾರ್ಮಿಕರ ಮೇಲೆ ನಿರಂತರ ದಾಳಿ ಮಾಡುತ್ತಿವೆ. ಈ ಹಾವಳಿ ತಡೆಗಟ್ಟಲು ಅರಣ್ಯ ಇಲಾಖೆ ವಿಫಲವಾಗಿದೆ. ಶಾಶ್ವತವಾಗಿ ಕಾಡಾನೆ ಹಾವಳಿ ತಡೆಗಟ್ಟುವಂತೆ ಸ್ಥಳೀಯರು ಆರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.