ಕಾಫಿ ತೋಟದಲ್ಲಿ ಕಾಡು ಪ್ರಾಣಿಗಳ ಹಾವಳಿ ಕೊಡಗು:ಮಳೆ, ಪ್ರಕೃತಿ ವಿಕೋಪದ ಜೊತೆಗೆ ಕಾಡು ಪ್ರಾಣಿಗಳ ದಾಳಿಯಂತಹ ಸಮಸ್ಯೆಗಳಿಂದ ಗಿಡದಲ್ಲಿ ಉಳಿದಿರುವ ಕಾಫಿ ಕೊಯ್ಯಲು ಭಯಪಡುವ ಪರಿಸ್ಥಿತಿ ಕೊಡಗಿನಲ್ಲಿ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ಮಾನವ ಮತ್ತು ಕಾಡು ಪ್ರಾಣಿಗಳ ಸಂಘರ್ಷ ಹೆಚ್ಚಾಗಿದೆ. ಕಾಫಿ ತೋಟದಲ್ಲಿ ಕಾಡಾನೆಗಳು, ಹುಲಿಗಳು, ದಾಳಿ ನಡೆಸುತ್ತಿವೆ. ಕೂಲಿ ಕಾರ್ಮಿಕರು, ಮಾಲೀಕರು ತೋಟಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.
ಕಾಫಿ ಹೆಚ್ಚು ಬೆಳೆಯುವ ಕೊಡಗಿನಲ್ಲಿ ಈಗ ಕಾಫಿ ಹಣ್ಣಾಗಿ ಕೊಯ್ಲಿಗೆ ಬಂದಿದೆ. ಕಟಾವಿನ ಸಮಯವಿದು. ವರ್ಷಗಳಿಂದ ಕಷ್ಟಪಟ್ಟು ಬೆಳೆದು ಬೆಳೆ ಕೈಗೆ ಬರುವ ಹೊತ್ತಿಗೆ ಪ್ರಾಣಿಗಳ ಹಾವಳಿ ರೈತರಿಗೆ ನುಂಗಲಾರದ ತುತ್ತಾಗಿದೆ. ಕಾಡು ಪ್ರಾಣಿಗಳ ಹಾವಳಿಯ ಆತಂಕದ ನಡುವೆಯೂ ಜೀವನ ನಿರ್ವಹಣೆ ಮಾಡುವ ಸ್ಥಿತಿ ಉಂಟಾಗಿದೆ. ಗ್ರಾಮೀಣ ಭಾಗಗಳಲ್ಲಿ ಬಹುತೇಕ ರೈತರು ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿದ್ದು, ಕಾಡು ಪ್ರಾಣಿಗಳ ಹಾವಳಿಯಿಂದಾಗಿ ಭತ್ತದ ಕೃಷಿಯನ್ನೇ ಮಾಡದೆ ಕೈ ಬಿಟ್ಟಿದ್ದಾರೆ. ಇದರಿಂದ ಕೃಷಿ ಫಸಲು ನಷ್ಟ ಉಂಟಾದರೆ ಅರಣ್ಯ ಇಲಾಖೆ ನಷ್ಟಕ್ಕೆ ಸರಿಯಾಗಿ ಪರಿಹಾರವನ್ನೂ ನೀಡುತ್ತಿಲ್ಲ ಎಂಬ ಆರೋಪ ಸ್ಥಳೀಯರದ್ದು.
ರೈಲ್ವೇ ಬ್ಯಾರಿಕೇಡ್ ದಾಟಿ ಬರುವ ಆನೆಗಳು: ಕಾಡು ಪ್ರಾಣಿಗಳ ಹಾವಳಿ ತಡೆಗೆ ಹಲವು ಯೋಜನೆಗಳನ್ನು ರೂಪಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ನಿರಂತರವಾಗಿ ಅರಣ್ಯದ ಗಡಿ ದಾಟಿ ನಾಡಿನೊಳಗೆ ಕಾಲಿಡುತ್ತಿವೆ. ದುಬಾರೆ ಅರಣ್ಯ ವ್ಯಾಪ್ತಿಯಲ್ಲಿ ಬಹುತೇಕ ಕಡೆ ಕೋಟಿಗಟ್ಟಲೆ ಖರ್ಚು ಮಾಡಿ ರೈಲ್ವೇ ಬ್ಯಾರಿಕೇಡ್ ಅಳವಡಿಸಿದರೂ ಆನೆಗಳು ರೈಲ್ವೇ ಕಂಬಿ ದಾಟಿ ತೋಟಗಳಿಗೆ ನುಗ್ಗುತ್ತಿವೆ. ಕಾಡು ಪ್ರಾಣಿಗಳ ಹಾವಳಿ ತಡೆಗೆ ಕೈಗೊಂಡ ಯೋಜನೆಗಳು ನಿಷ್ಕ್ರಿಯವಾಗಿವೆ ಎನ್ನುವ ದೂರುಗಳು ಕೇಳಿ ಬರುತ್ತಿವೆ. ಕಾಫಿ ತೋಟಗಳಲ್ಲಿ ಅಡಗಿಕೊಂಡಿರುವ ಕರಡಿಗಳು ಮಾಲೀಕರನ್ನು ಮತ್ತು ಕಾರ್ಮಿಕರನ್ನು ಆತಂಕಕ್ಕೀಡು ಮಾಡಿವೆ. ದಿಢೀರ್ ಮಾನವನ ಮೇಲೆ ದಾಳಿ ನಡೆಸುತ್ತಿರುವುದರಿಂದ, ಕಾಫಿ ಹಣ್ಣಾಗಿದ್ದು, ಕೊಯ್ಯಬೇಕಿರುವ ಈ ಹೊತ್ತಲ್ಲಿ ಕಾರ್ಮಿಕರು ತೋಟಗಳಿಗೆ ಕೆಲಸಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.
ಕಾರ್ಮಿಕರ ಮೇಲೆ ಕರಡಿ ದಾಳಿ: ಇತ್ತೀಚೆಗಷ್ಟೇ ಕಾಫಿ ತೋಟಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಕರಡಿಗಳ ದಾಳಿ ನಡೆದ ಉದಾಹರಣೆಗಳೂ ಇವೆ. ಡಿಸೆಂಬರ್, ಜನವರಿ, ಫೆಬ್ರುವರಿ ತಿಂಗಳು ಕಾಫಿ ಹಣ್ಣಾಗುವ ಸಮಯವಾಗಿದ್ದು, ಕೊಯ್ಲಿಗೆ ಬಂದಿವೆ. ಈ ಸಂದರ್ಭದಲ್ಲಿ ಕಾಡಾನೆಗಳ ಜೊತೆಯಲ್ಲಿ ಕಾಡುಕೋಣ, ಕಾಡೆಮ್ಮೆ, ಕಾಡು ಹಂದಿ, ಕಾಡು ಬೆಕ್ಕು, ಕೋತಿಗಳು ಕೂಡ ತೋಟಕ್ಕೆ ಲಗ್ಗೆ ಇಡಲು ಆರಂಭಿಸುತ್ತವೆ. ಹಣ್ಣು ಕಾಫಿಯ ರುಚಿಯನ್ನು ಒಮ್ಮೆ ಸವಿದ ನಂತರ ಕಾಡು ಪ್ರಾಣಿಗಳು ಆ ರುಚಿಗಾಗಿ ಮತ್ತೆ ಮತ್ತೆ ಬಂದು ಬೆಳೆಗಾರನಿಗೆ ನಷ್ಟ ಉಂಟುಮಾಡುತ್ತವೆ. ಈ ವರ್ಷ ಕರಡಿಗಳ ಕಾಟವೂ ಹೊಸ ತಲೆ ನೋವಿಗೆ ಕಾರಣವಾಗಿದೆ. ಇಂತಹ ಸಂಕಷ್ಟ ಸಮಯದಲ್ಲಿ ಉಳಿದ ಕಾಡು ಪ್ರಾಣಿಗಳೂ ಬೆಳೆಗಾರನ ಗಾಯಕ್ಕೆ ಉಪ್ಪು ಸವರುವ ಕೆಲಸ ಮಾಡುತ್ತಿವೆ.
ಇದನ್ನೂ ಓದಿ:ಚಾಮರಾಜನಗರದಲ್ಲಿ 30ಕ್ಕೂ ಹೆಚ್ಚು ಕಾಡಾನೆಗಳು ಪ್ರತ್ಯಕ್ಷ: ಗ್ರಾಮಸ್ಥರಲ್ಲಿ ಆತಂಕ- ವಿಡಿಯೋ