ಕೊಡಗು :ಮಳೆಗಾಲದಲ್ಲಿ ತುಂಬಿ ಹರಿದು ಪ್ರವಾಹ ಉಂಟು ಮಾಡುತ್ತಿದ್ದ ಜೀವನದಿ ಕಾವೇರಿಯಲ್ಲಿ ಇದೀಗ ಮಾರ್ಚ್ ಆರಂಭದಲ್ಲೇ ನೀರಿನ ಹರಿವಿನ ಪ್ರಮಾಣ ಬಹುತೇಕ ಕ್ಷೀಣಗೊಳ್ಳುತ್ತಿದೆ.
ಹೀಗೆ ಮುಂದುವರೆದಲ್ಲಿ ಒಂದು ವಾರದ ಅವಧಿಯಲ್ಲಿ ಕುಶಾಲನಗರ ಸೇರಿದಂತೆ ಸುತ್ತಮುತ್ತ ವ್ಯಾಪ್ತಿಯ ನಾಗರಿಕರಿಗೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುವ ಸಾಧ್ಯತೆಯಿದ್ದು, ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.
ಕೊಡಗಿನಲ್ಲಿ ಹುಟ್ಟಿ ನಾಡಿನ ಉದ್ದಗಲಕ್ಕೂ ಹರಿದು ರೈತರ ಪಾಲಿಗೆ ವರದಾನವಾಗಿರುವ ಕಾವೇರಿ ನದಿಯ ಒಡಲು ಇದೀಗ ಕೊಡಗಿನಲ್ಲಿಯೇ ಬರಿದಾಗುತ್ತಿದೆ. ವರ್ಷದ 4 ತಿಂಗಳು ತುಂಬಿ ಹರಿಯುವ ಕಾವೇರಿಯಲ್ಲಿ ಇದೀಗ ನೀರಿನ ಹರಿವಿನ ಕೊರತೆ ಎದ್ದು ಕಾಣುತ್ತಿದೆ. ಈ ಬಾರಿ ನಿರಂತರವಾಗಿ ಮಳೆ ಸುರಿದರೂ ಕಾವೇರಿ ನದಿ ಜಲಮೂಲಗಳು ಅಲ್ಲಲ್ಲಿ ಬತ್ತಿಹೋಗಿರುವ ದೃಶ್ಯ ಗೋಚರಿಸುತ್ತಿವೆ.
ಕಳೆದ ಕೆಲವು ದಿನಗಳಿಂದ ಮೂಲ ಕಾವೇರಿಯಿಂದ ಕುಶಾಲನಗರದವರೆಗೆ ಕೃಷಿಕರು ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಅವಶ್ಯವಿರುವ ನೀರಿಗಾಗಿ ಸಾವಿರಾರು ಸಂಖ್ಯೆಯಲ್ಲಿ ಮೋಟಾರ್ ಪಂಪ್ಗಳನ್ನು ಅಳವಡಿಸಿದ್ದಾರೆ. ಇದರಿಂದ ನದಿಯಲ್ಲಿ ನೀರಿನ ಹರಿವು ಅಲ್ಲಲ್ಲಿ ಬತ್ತಿ ಹೋಗುತ್ತಿದೆ.
ನದಿ ತಟದಲ್ಲಿರುವ ಕೃಷಿಕರು ವಾಣಿಜ್ಯ ಬೆಳೆ ಸೇರಿದಂತೆ ವಾಣಿಜ್ಯ ಕಟ್ಟಡಗಳಿಗೆ ನೀರು ಪಂಪ್ ಮಾಡುತ್ತಿದ್ದು, ಇದರಿಂದ ನದಿಯಲ್ಲಿ ನೀರಿನ ಕೊರತೆ ಉಂಟಾಗಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯ.