ಕೊಡಗು: ದಕ್ಷಿಣ ಕೊಡಗಿನ ಬೆಸಗೂರು ಕೀರೆ ಹೊಳೆಯಲ್ಲಿ ಅಪರೂಪ ಎನ್ನಲಾದ ನೀರು ನಾಯಿಗಳು ಕಾಣಿಸಿಕೊಂಡಿದ್ದು, ಇಲ್ಲಿನ ನಿವಾಸಿ ಬಾಚಮಾಡ ಶರಣು ಭೀಮಯ್ಯ ತಮ್ಮ ಮೊಬೈಲ್ ಕ್ಯಾಮರಾದಿಂದ ಈ ಅಪರೂಪದ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.
ಕೊಡಗು: ಬಲು ಅಪರೂಪಕ್ಕೆ ಕಂಡು ಬಂದ 'ನೀರು ನಾಯಿ'ಗಳ ಹಿಂಡು - ವಿಡಿಯೋ ವೈರಲ್ - Bachamada Bhimayya
ಕೊಡಗಿನಲ್ಲಿ ತೀರಾ ಅಪರೂಪ ಎನ್ನಲಾದ ನೀರು ನಾಯಿಗಳು ಕಂಡು ಬಂದಿದ್ದು, ಇವುಗಳ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತೀರ ಅಪರೂಪ ಎನ್ನಲಾದ ಈ ನೀರು ನಾಯಿಗಳು ಜಿಲ್ಲೆಯ ಬೆಸಗೂರಿನಲ್ಲಿ ಕಾಣಿಸಿಕೊಂಡಿರುವುದು ಇದೇ ಮೊದಲು ಎನ್ನಲಾಗ್ತಿದೆ. ಮನೆಯ ಹತ್ತಿರದ ಹೊಳೆಯ ಭಾಗಕ್ಕೆ ಹೋದ ಭೀಮಯ್ಯನಿಗೆ ಹೊಳೆಯಲ್ಲಿ ಏನೋ ವಿಚಿತ್ರವಾಗಿ ಅರಚಾಡುವ ಶಬ್ದ ಕೇಳಿಸಿದೆ. ನಂತರ ಅಲ್ಲಿದ್ದ ದನ - ಕರುಗಳು ಗಾಬರಿಯಿಂದ ಓಡಲಾರಂಭಿಸಿವೆ. ಹತ್ತಿರ ಹೋಗಿ ನೋಡಿದಾಗ ಸುಮಾರು 15ಕ್ಕೂ ಹೆಚ್ಚು ನೀರು ನಾಯಿಗಳು ಪತ್ತೆಯಾಗಿವೆ.
ಮೊಬೈಲ್'ನಲ್ಲಿ ದೃಶ್ಯ ಸೆರೆ ಹಿಡಿಯುತ್ತಿದ್ದಂತೆ ಅವುಗಳು ಅಪಾಯದ ಸೂಚನೆ ಅರಿತು ಕ್ಷಣ ಮಾತ್ರದಲ್ಲಿ ನೀರಿನಲ್ಲಿ ಮುಳುಗಿ ಪರಾರಿಯಾಗಿವೆ ಎಂದು ಬಾಚಮಾಡ ಭೀಮಯ್ಯ ಮಾಹಿತಿ ನೀಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.