ವಿರಾಜಪೇಟೆ(ಕೊಡಗು) :ಸರ್ಕಾರ ಬಡತನ ನಿರ್ಮೂಲನೆಗೆ ಹಾಗೂ ಬಡವರಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು ಹಲವಾರು ರೀತಿ ಸಹಾಯ ಮಾಡುತ್ತಿದೆ. ಆದರೆ, ಅಧಿಕಾರಿಗಳ ಬೇಜವಾಬ್ದಾರಿಗೆ ಬಡ ಜನರು ಇನ್ನೂ ಬಡವರಾಗಿಯೇ ಉಳಿಯುತ್ತಿದ್ದಾರೆ. ಒಂದೆಡೆ ಬಡತನ, ಮತ್ತೊಂದೆಡೆ ಮಕ್ಕಳ ವಿದ್ಯಾಭ್ಯಾಸ. ಇಷ್ಟೆಲ್ಲ ನೋವಿನ ನಡುವೆ ಸೂರಿಲ್ಲದೆ ನಿತ್ಯ ನರಕದ ಜೀವನ ಅನುಭವಿಸುತ್ತಿದೆ ಈ ಕುಟುಂಬ.
60 ವರ್ಷದಿಂದ ಒಳ್ಳೆಯ ಸೂರಿಲ್ಲದೆ ಬದುಕುತ್ತಿದೆ ಈ ಕುಟುಂಬ ತಾಲೂಕಿನ ಬೇಟೋಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಾಸವಿರುವ ರಾಮಚಂದ್ರ ಹಾಗೂ ಪದ್ಮಾವತಿ ಕುಟುಂಬದ ಪರಿಸ್ಥಿತಿ ಹೇಳತೀರದಾಗಿದೆ. ರಾಮಚಂದ್ರ ಅವರು ಸ್ಥಳೀಯ ತೋಟಗಳಲ್ಲಿ ಕೂಲಿ ಮಾಡಿ ಹೇಗೋ ಜೀವನ ಕಳೆಯುತ್ತಿದ್ದಾರೆ. ಪದ್ಮಾವತಿ ಅವರು ಅನಾರೋಗ್ಯಕ್ಕೊಳಗಾಗಿದ್ದು, ಮನೆಯಲ್ಲೇ ಇರುವಂತಾಗಿದೆ. ಮಗ ಕಿಶೋರ್ ದ್ವಿತೀಯ ಪಿಯುಸಿಯನ್ನು ವಿರಾಜಪೇಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈಗಾಗಲೇ ಮುಗಿಸಿದ್ದಾನೆ.
ಕಲಾ ವಿಭಾಗದಲ್ಲಿ ಶೇ.80.6%ರಷ್ಟು ಅಂಕ ಪಡೆದಿರುವ ಪ್ರತಿಭಾವಂತ ವಿದ್ಯಾರ್ಥಿ. ಮಗಳು ಕೀರ್ತನಾ 9ನೇ ತರಗತಿ ಮುಗಿಸಿದ್ದಾಳೆ. ಜಿಹೆಚ್‌ಎಸ್ ಶಾಲೆ ಹೆಗ್ಗಳದಲ್ಲಿ 10ನೇ ತರಗತಿಗೆ ಸೇರಿದ್ದಾಳೆ. ಆದರೆ, ಅಲ್ಲಿಗೆ ಹೋಗಬೇಕು ಅಂದರೆ ಪ್ರತಿದಿನ ಕಿಲೋಮೀಟರ್ಗಟ್ಟಲೇ ನಡೆದೇ ತಲುಪಬೇಕು. ಕೊರೊನಾ ನಡುವೆ ಆನ್ಲೈನ್ ಪಾಠ ಇರುವುದರಿಂದ ಇವರಿಗೆ ತೋಟದ ಮಾಲೀಕರಾದ ಮನೋಜ್ ಎಂಬುವರು ಮೊಬೈಲ್ ನೀಡಿ ಸಹಾಯ ಮಾಡುತ್ತಿದ್ದಾರೆ. ಈ ಕುಟುಂಬ 60 ವರ್ಷಗಳ ಹಿಂದೆ ಇಲ್ಲಿ ಬಂದು ನೆಲೆಯೂರಿದೆ. ಅಂದು ಹೇಗಿದ್ದರೋ ಅದೇ ಪರಿಸ್ಥಿತಿಯಲ್ಲಿ ಇಂದಿಗೂ ಜೀವನ ನಡೆಸುತ್ತಿರುವುದು ವಿಪರ್ಯಾಸ.
ಮನೆ ನಿರ್ಮಿಸಿಕೊಡುವಂತೆ ಗ್ರಾಮ ಪಂಚಾಯತ್ಗೆ ಹಲವಾರು ಬಾರಿ ಅರ್ಜಿಗಳನ್ನು ಸಲ್ಲಿಸಿದ್ದರೂ ಸಹ ಪ್ರಯೋಜನವಾಗಿಲ್ಲವಂತೆ. ಆದಿ ಮಾನವರ ಹಾಗೆ ಭೂಮಿ ಮಟ್ಟದಲ್ಲಿರುವ ಜೋಪಡಿಯಲ್ಲಿ ವಾಸ ಮಾಡುತ್ತಿರುವ ಇವರಿಗೆ ಈವರೆಗೂ ಸರ್ಕಾರದಿಂದ ಯಾವ ಸೌಲಭ್ಯವೂ ಲಭಿಸಿಲ್ಲ. ಮನೆಯ ಪಕ್ಕದಲ್ಲೇ ಕಾಡಾನೆಗಳು ಓಡಾಡುವುದರಿಂದ ಪ್ರತಿದಿನ ಜೀವಭಯದಲ್ಲಿ ಬದುಕುತ್ತಿದ್ದಾರೆ. ಇವರಿಗೆ ವಿದ್ಯುತ್ ನೀಡಿಲ್ಲ, ಶೌಚಾಲಯ ಕಟ್ಟಿಸಿಕೊಟ್ಟಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಇವರಿಗೆ ಯಾವ ಮೂಲಸೌಲಭ್ಯವನ್ನೂ ನೀಡಿಲ್ಲ. ಈ ಹಿನ್ನೆಲೆ ತಮಗೆ ಬದುಕಲು ಸೌಲಭ್ಯ ಕಲ್ಪಿಸಿಕೊಡಿ ಎಂಬುದು ಇವರ ನೋವಿನ ಮನವಿ.