ಕರ್ನಾಟಕ

karnataka

ETV Bharat / state

ಕೊಡಗಿನಲ್ಲಿ ನಿರಾಶ್ರಿತರಿಗೆ ಮನೆ ಹಕ್ಕುಪತ್ರ ಹಸ್ತಾಂತರ - ರಾಜೀವ್ ಗಾಂಧಿ ವಸತಿ ನಿಗಮ

2018 ರ ಆಗಸ್ಟ್​ನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡಲಾಗಿದೆ. ಈ ಮನೆಯನ್ನು ಬೇರೆಯವರಿಗೆ ಬಾಡಿಗೆ ಅಥವಾ ಭೋಗ್ಯ ನೀಡುವುದು ಕಂಡು ಬಂದಲ್ಲಿ ಅಂತವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಂ ಪಿ ಅಪ್ಪಚ್ಚುರಂಜನ್ ಅವರು ತಿಳಿಸಿದ್ದಾರೆ.

ಕೊಡಗಿನಲ್ಲಿ ಮನೆ ನಿರ್ಮಾಣ
ಕೊಡಗಿನಲ್ಲಿ ಮನೆ ನಿರ್ಮಾಣ

By

Published : Dec 2, 2022, 9:22 PM IST

ಕೊಡಗು: 2018ರ ಜಲಪ್ರಳಯದ ಹೊಡೆತಕ್ಕೆ ಸಿಲುಕಿ ಮನೆ ಆಸ್ತಿ ಕಳೆದುಕೊಂಡು ಬೀದಿಪಾಲಗಿದ್ದ ನಿರಾಶ್ರಿತರು ಇಷ್ಟು ವರ್ಷಗಳವರೆಗೆ ಪ್ರತಿಭಟನೆ ನಡೆಸಿದ್ದರು. ಇದೀಗ ನಿರಾಶ್ರಿತರ ಪ್ರತಿಭಟನೆಗೆ ಮಣಿದು ಜಿಲ್ಲಾಡಳಿತ ಇಂದು ಮನೆ ಹಸ್ತಾಂತರ ಮಾಡಿತು. ಮನೆ ಸಿಕ್ಕಿಲ್ಲ ಎಂದು ಕೊರಗುತ್ತಿದ್ದ ನಿರಾಶ್ರಿತರ ಮುಖದಲ್ಲಿ ಇದೀಗ ಮಂದಹಾಸ ಮೂಡಿದೆ.

ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವರು ಮಾತನಾಡಿದರು

ಜಿಲ್ಲೆಯಲ್ಲಿ 2018ರ ಪ್ರಾಕೃತಿಕ ವಿಕೋಪದ‌ ನಿರಾಶ್ರಿತರಿಗೆ ಇವತ್ತು ಹಬ್ಬದ ದಿನ. ಕಳೆದ ನಾಲ್ಕು ವರ್ಷಗಳಿಂದ ಸೂರಿಗಾಗಿ‌ ಚಾತಕ ಪಕ್ಷಿಯಂತೆ ಕಾದಿದ್ದ ಸುಮಾರು 74 ಕುಟುಂಬಗಳ ಮೊಗದಲ್ಲಿ ಹರ್ಷ, ಸಂಭ್ರಮ ಮನೆಮಾಡಿತ್ತು. ನಿರಾಶ್ರಿತರ ಗಡುವಿಗೆ ಬೆಚ್ಚಿ ಬಿದ್ದ ಜಿಲ್ಲಾಡಳಿತ ಕಡೆಗೂ ಮನೆಗಳನ್ನ ಹಸ್ತಾಂತರಿಸಿತ್ತು. ಕಡೆಗೂ ಸೂರು ಸಿಕ್ಕಿತಲ್ಲ ಎಂಬ ಸಂಭ್ರಮದಿಂದಲೇ ಎಲ್ಲರೂ ಹೊಸ ಮನೆಗೆ ಪ್ರವೇಶ ಮಾಡಿದ್ದರು.

ಸೂರು ಸಿಕಿದ್ದೇ ಜಿಲ್ಲಾಡಳಿತ, ರಾಜೀವ್‍ಗಾಂಧಿ ವಸತಿ ನಿಗಮ, ಪ್ರಾಕೃತಿಕ ವಿಕೋಪ ಪುನರ್ ವಸತಿ ಯೋಜನೆಯಡಿ 2018 ರ ಆಗಸ್ಟ್​ನಲ್ಲಿ ಪ್ರವಾಹಕ್ಕೆ ಒಳಗಾದ ಸಂತ್ರಸ್ತರಿಗೆ ಪುನರ್ ವಸತಿಗಾಗಿ ನಿರ್ಮಿಸಿರುವ ಬಡಾವಣೆಯ ಉದ್ಘಾಟನೆ ಹಾಗೂ ಮನೆಗಳ ವಿತರಣೆಯನ್ನು ಶಾಸಕರಾದ ಎಂ. ಪಿ ಅಪ್ಪಚ್ಚುರಂಜನ್ ಅವರು ಕೆ. ನಿಡುಗಣೆ ಗ್ರಾ. ಪಂ ವ್ಯಾಪ್ತಿಯ ಪ್ರಾದೇಶಿಕ ಸಾರಿಗೆ ಕಚೇರಿ ಬಳಿ ಶುಕ್ರವಾರ ನೆರವೇರಿಸಿದರು.

ನಿಯಮಾನುಸಾರ ಕ್ರಮ:ಫಲಾನುಭವಿಗಳಿಗೆ ಮನೆಪತ್ರ ವಿತರಿಸಿ ಮಾತನಾಡಿದ ಶಾಸಕ ಎಂ ಪಿ ಅಪ್ಪಚ್ಚುರಂಜನ್ ಅವರು, 2018 ರ ಆಗಸ್ಟ್​ನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡಲಾಗಿದೆ. ಈ ಮನೆಯನ್ನು ಬೇರೆಯವರಿಗೆ ಬಾಡಿಗೆ ಅಥವಾ ಭೋಗ್ಯ ನೀಡುವುದು ಕಂಡು ಬಂದಲ್ಲಿ ಅಂತವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಕೊಡಗು ಜಿಲ್ಲಾಧಿಕಾರಿ ಸತೀಶ್​ ಅವರು ಮಾತನಾಡಿದರು

ಮನೆಯನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡಿಕೊಳ್ಳಬಾರದು. ಈಗಾಗಲೇ ಹಂಚಿಕೆ ಮಾಡಲಾಗಿರುವ ಸಂತ್ರಸ್ತರಿಗೆ ಬೇರೆ ಕಡೆ ಸ್ವಂತ ಮನೆ ಹೊಂದಿದ್ದಲ್ಲಿ ಪರಿಶೀಲಿಸಿ ಮುಂದಿನ ಕ್ರಮವಹಿಸಲಾಗುವುದು ಎಂದು ಶಾಸಕರಾದ ಎಂ. ಪಿ ಅಪ್ಪಚ್ಚುರಂಜನ್ ಅವರು ತಿಳಿಸಿದರು.

‘2018 ರಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಮನೆ, ಮಠ ಆಸ್ತಿ-ಪಾಸ್ತಿ ಕಳೆದುಕೊಂಡರು. ಈ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಹೆಚ್. ಡಿ ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡಿದಾಗ 9.85 ಲಕ್ಷ ರೂ. ವೆಚ್ಚದ ಮನೆ ನಿರ್ಮಾಣಕ್ಕೆ ಅನುಮತಿ ನೀಡಿದ್ದರು. ಅದರಂತೆ ಸುಸಜ್ಜಿತ ಮನೆಗಳನ್ನು ನಿರ್ಮಿಸಲಾಗಿದ್ದು, ಸಂತ್ರಸ್ತರು ಸರಿಯಾಗಿ ಬಳಸಿಕೊಳ್ಳಬೇಕು ಎಂದರು.’

ಬಡಾವಣೆಯಲ್ಲಿ ಕಾಂಕ್ರೀಟ್ ರಸ್ತೆ, ಒಳಚರಂಡಿ, ವಿದ್ಯುತ್ ದೀಪ ಸೇರಿದಂತೆ ಹಲವು ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಈಗಾಗಲೇ ಮಾದಾಪುರ, ಗಾಳಿಬೀಡು, ಬಿಳಿಗಿರಿ, ಮದೆನಾಡು ಇತರ ಕಡೆಗಳಲ್ಲಿ ಮನೆ ನಿರ್ಮಾಣ ಮಾಡಿ ಸಂತ್ರಸ್ತರಿಗೆ ಹಸ್ತಾಂತರಿಸಲಾಗಿದೆ ಎಂದು ಶಾಸಕರು ತಿಳಿಸಿದರು.

ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡಬೇಕು: ಮನೆ ನಿರ್ಮಾಣದಲ್ಲಿ ವಸತಿ ಸಚಿವ ವಿ ಸೋಮಣ್ಣ ಅವರ ಪ್ರಯತ್ನ ಸಾಕಷ್ಟು ಇದೆ. ವಸತಿ ಸಚಿವರಾಗಿ ಮನೆಗಳ ಶೀಘ್ರ ನಿರ್ಮಾಣಕ್ಕೆ ಶ್ರಮಿಸಿದ್ದಾರೆ ಎಂದು ಶಾಸಕರು ತಿಳಿಸಿದರು. ಮನೆ ಹಾಗೂ ಮನೆಯ ಸುತ್ತಮುತ್ತ ಪರಿಸರ ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡಬೇಕು. ಪ್ರತೀ ವರ್ಷ ಒಂದು ಸಾವಿರವನ್ನಾದರೂ ಪ್ರತೀ ಮನೆಯವರು ಸಂಗ್ರಹಿಸಿ ಸಮಿತಿ ಮಾದರಿಯಲ್ಲಿ ರಚನೆ ಮಾಡಿಕೊಂಡು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಮುಂದಾಗಬೇಕು ಎಂದರು.

ಮನೆ ಮುಂಭಾಗ ಶೆಡ್ ನಿರ್ಮಾಣ ಮಾಡಲು ಮುಂದಾಗಬಾರದು. ಹಿಂಬದಿಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಶೆಡ್ ನಿರ್ಮಿಸಿಕೊಳ್ಳಬಹುದಾಗಿದೆ. ಮುಂಭಾಗದಲ್ಲಿ ಯಾವುದೇ ಕಾರಣಕ್ಕೂ ಮನೆಯ ನಕಾಶೆಯನ್ನು ಬದಲಿಸಬಾರದು ಎಂದು ಅಪ್ಪಚ್ಚು ರಂಜನ್ ಅವರು ಸಲಹೆ ಮಾಡಿದರು.
ಸಂತ್ರಸ್ತರು ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕಲ್ಪಿಸಬೇಕು. ಮೂರು ತಿಂಗಳಿಗೊಮ್ಮೆ ಬಡಾವಣೆಗೆ ಭೇಟಿ ನೀಡಿ ಅಹವಾಲು ಆಲಿಸಲಾಗುವುದು ಎಂದು ಶಾಸಕರು ಹೇಳಿದರು.

ಪರಿಸರ ಸಂರಕ್ಷಿಸಬಹುದು: ಸುಸಜ್ಜಿತ ಮನೆಗಳನ್ನು ನಿರ್ಮಿಸಲಾಗಿದ್ದು, ಮನೆಯ ಸುತ್ತಮುತ್ತ ತರಕಾರಿ, ಹಣ್ಣು, ಹೂ ಮತ್ತಿತರ ಗಿಡಗಳನ್ನು ನೆಟ್ಟು ಕೈತೋಟ ನಿರ್ಮಾಣ ಮಾಡುವಂತಾಗಬೇಕು. ಇದರಿಂದ ಪರಿಸರ ಸಂರಕ್ಷಿಸಬಹುದು ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿ ಡಾ. ಬಿ. ಸಿ ಸತೀಶ್​ ಮಾತನಾಡಿ ಕಂದಾಯ, ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಸೇರಿದಂತೆ ಇತರರನ್ನು ಒಳಗೊಂಡ ಸಮಿತಿಯನ್ನು ರಚಿಸಿ ಬಡಾವಣೆ ಅಭಿವೃದ್ಧಿ ಹಾಗೂ ಕುಂದುಕೊರತೆ ನಿವಾರಣೆಗೆ ಮುಂದಾಗಬೇಕು ಎಂದು ಅವರು ಸಲಹೆ ನೀಡಿದರು.

ಕೆ. ನಿಡುಗಣೆ ಗ್ರಾ. ಪಂ ಪ್ರಾದೇಶಿಕ ಕಚೇರಿ ಬಳಿ ನಿರ್ಮಾಣವಾಗಿರುವ ಮನೆಗೆ ತುಂಬಾ ಬೇಡಿಕೆ ಇದೆ. ಆದ್ದರಿಂದ ಮನೆಯನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು. ‘ಒಂದು ಕಡೆ ಸ್ವಂತ ಮನೆಗೆ ಹೋಗುವ ಸಂತಸವಿದ್ದರೆ, ಮತ್ತೊಂದು ಕಡೆ ಇರುವ ಮನೆಯನ್ನು ಬಿಟ್ಟು ಬರುವ ನೋವು ಸಹ ಇರುತ್ತದೆ. ಒಟ್ಟಾರೆ ಎಲ್ಲವನ್ನು ಸಮತೋಲನವಾಗಿ ಸ್ವೀಕರಿಸಿ ಉತ್ತಮ ಬದುಕುಕಟ್ಟಿಕೊಳ್ಳಲು ಸಂತ್ರಸ್ತರು ಮುಂದಾಗಬೇಕು ಎಂದು ಡಾ. ಬಿ. ಸಿ ಸತೀಶ್​ ಅವರು ತಿಳಿಸಿದರು.’

ಸರ್ಕಾರದ ನಿಯಮಗಳಂತೆ ಕ್ರಮ: ಬಡಾವಣೆಯನ್ನು ಒಂದು ವರ್ಷದವರೆಗೆ ನಿರ್ವಹಣೆ ಮಾಡಲಾಗುವುದು. ಮತ್ತೆ ಬಡಾವಣೆ ಕುಂದುಕೊರತೆ ಮತ್ತಿತರ ಸಂಬಂಧ ತಾವೇ ಪರಿಹರಿಸಿಕೊಳ್ಳಬೇಕು. ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲಾಗುವುದು. ಅರ್ಹರಲ್ಲದವರು ಮನೆ ಪಡೆದಿದ್ದಲ್ಲಿ ಪರಿಶೀಲಿಸಿ ಸರ್ಕಾರದ ನಿಯಮಗಳಂತೆ ಕ್ರಮವಹಿಸಲಾಗುವುದು ಎಂದರು.

ರಾಜೀವ್ ಗಾಂಧಿ ವಸತಿ ನಿಗಮದ ಯೋಜನಾ ನಿರ್ದೇಶಕರಾದ ಹೆಚ್. ಶ್ರೀನಿವಾಸ್ ಅವರು ಮಾತನಾಡಿ, ಈಗಾಗಲೇ ಕರ್ಣಂಗೇರಿಯಲ್ಲಿ 35 ಮನೆ, ಮದೆನಾಡು 80, ಜಂಬೂರು, ಮಾದಪುರ 383, ಬಿಳಿಗೇರಿ 22, ಕೆ. ನಿಡುಗಣೆ ಗ್ರಾಮದಲ್ಲಿ 75 ಹಾಗೆಯೇ ಗಾಳಿಬೀಡು ಗ್ರಾಮದಲ್ಲಿ 140 ರಲ್ಲಿ 60 ಮನೆಗಳನ್ನು ಹಸ್ತಾಂತರಿಸಲಾಗಿದೆ. ಒಟ್ಟಾರೆ ಇದುವರೆಗೆ 666 ಮನೆಗಳನ್ನು ಸಂತ್ರಸ್ತರಿಗೆ ಹಸ್ತಾಂತರಿಸಲಾಗಿದೆ ಎಂದು ಅವರು ತಿಳಿಸಿದರು.

ಓದಿ:ಫಲಾನುಭವಿಗಳಿಗೆ ಹಂಚಿಕೆಯಾಗದ ಮನೆ: ಕೊಡಗು ಸಂತ್ರಸ್ತರ ಆಕ್ರೋಶ

ABOUT THE AUTHOR

...view details