ಕೊಡಗು: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮುತ್ತಾರು ಮುಡಿ ಗ್ರಾಮದಲ್ಲಿ ಆಯೋಜಿಸಿದ್ದ ಸಂಸ್ಕೃತಿ ಜನಪದ ಹಬ್ಬದಲ್ಲಿ ಅರೆಭಾಷೆ ಗೌಡ ಜನಾಂಗದ ಆಚಾರ ವಿಚಾರಗಳು ಅನಾವರಣಗೊಂಡಿತ್ತು.
ವಿಭಿನ್ನ ಸಾಂಪ್ರದಾಯಿಕ ಸಂಸ್ಕೃತಿಯ ಅನಾವರಣಗೊಳಿಸಿದ ರಾಜ್ಯ ಅರೆಭಾಷೆ ಸಾಹಿತ್ಯ ವೇದಿಕೆ - kannadanews
ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮುತ್ತಾರು ಮುಡಿ ಗ್ರಾಮದಲ್ಲಿ ಸಂಸ್ಕೃತಿ ಜನಪದ ಹಬ್ಬ ಆಯೋಜಿಸಲಾಗಿತ್ತು.
ವೇದಿಕೆಯಲ್ಲಿ ಈ ಜನಾಂಗದ ಪೂರ್ವಜರು ಪುರಾತನ ಕಾಲದಲ್ಲಿ ಬಳಸುತ್ತಿದ್ದ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಹಚ್ಚ ಹಸಿರ ಸುಂದರ ಪ್ರಕೃತಿಯ ನಡುವೆ ಪುಟ್ಟ ವೇದಿಕೆ, ಸಾಂಪ್ರದಾಯಿಕ ಉಡುಪು ತೊಟ್ಟು ಕಳಸ ಹಿಡಿದು ನಿಂತಿರುವ ಮಹಿಳೆಯರು, ಕೃಷಿ ಚಟುವಟಿಕೆಗೆ ಬಳಸುವ ನೇಗಿಲು, ನೊಗ, ಮರ, ಗೊರಗ, ಅಡುಗೆ ಮಾಡಲು ಬಳಸುವ ಪುರಾತನ ಮಡಿಕೆ, ಕುಡಿಕೆಗಳು, ಸಾಂಪ್ರದಾಯಿಕ ತಿಂಡಿ ತಿನಿಸುಗಳು, ಹಿತ್ತಲಲ್ಲೇ ಬೆಳೆದ ಹಣ್ಣುಗಳು, ಹಣ್ಣುಗಳಿಂದ ತಯಾರಿಸಿದ ವೈನ್. ಹೀಗೆ ಪೂರ್ವಜರು ಬಳಸುತ್ತಿದ್ದ ವಸ್ತುಗಳನ್ನು ಸಮಾಜದ ಕಿರಿಯರಿಗೆ ಪರಿಚಯಿಸಲು ಹಮ್ಮಿಕೊಂಡಿದ್ದ ವಸ್ತುಪ್ರದರ್ಶನ ಆಕರ್ಷಣೆಯಿಂದ ಕೂಡಿದ್ದವು.
ಸುಂದರ ವೇದಿಕೆಯಲ್ಲಿ ಛದ್ಮವೇಷ, ಏಕಪಾತ್ರ ಅಭಿನಯ, ಹರಿಸೇವೆ, ಸೋಬಾನೆ ಕಂಪು, ಜಾನಪದ ಕೃಷಿ ನೃತ್ಯದ ಇಂಪು, ತಾಳ ತಪ್ಪದ ಕೋಲಾಟದ ನೃತ್ಯ, ಸುಗ್ಗಿ ಸುವಾಲಿ ಹಾಡು ಕುಣಿತದ ಜೊತೆ ಚಿಕ್ಕವರು ದೊಡ್ಡವರು ಎನ್ನದೆ ವಾದ್ಯಕ್ಕೆ ಹೆಜ್ಜೆ ಹಾಕಿದರು. ಅರೆಭಾಷೆ ಗೌಡ ಜನಾಂಗದ ಸಾಂಸ್ಕೃತಿಕ ಸೊಗಡು, ಸಾಂಸ್ಕೃತಿಕ ನೃತ್ಯಕ್ಕೆ ಹೆಜ್ಜೆ ಹಾಕುವ ಪರಿ, ಅವರು ತೊಡುವ ಉಡುಗೆ ತೊಡುಗೆ ಅವರ ಸಂಸ್ಕೃತಿಯ ಶ್ರೀಮಂತಿಕೆಯನ್ನು ಬಿಂಬಿಸುತ್ತಿದ್ದವು.