ಕೊಡಗು: ಕೊಡವರ ಭಾಷೆ, ಕಲೆ, ಸಂಸ್ಕೃತಿಯ ಉಳಿವಿಗೆ ಸ್ಥಾಪನೆಯಾದ ಕೊಡವ ಸಾಹಿತ್ಯ ಅಕಾಡೆಮಿಗೆ ಇದೀಗ ಬೆಳ್ಳಿ ಹಬ್ಬದ ಸಂಭ್ರಮ. ಇಲ್ಲಿನ ಸಂಪ್ರದಾಯಿಕ ಉಡುಗೆ-ತೊಡುಗೆಗಳನ್ನು ಧರಿಸಿ ಮಿಂಚಿದ ಕೊಡವರು ಬೆಳ್ಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ.
ಕೊಡವ ಸಾಹಿತ್ಯ ಅಕಾಡೆಮಿಗೆ ಬೆಳ್ಳಿ ಹಬ್ಬದ ಸಂಭ್ರಮ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪಲು ತಾಲೂಕಿನಲ್ಲಿ ಕೊಡವ ಸಾಹಿತ್ಯ ಅಕಾಡೆಮಿ 25 ವರ್ಷ ಪೂರೈಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಹಮ್ಮಿಕೊಂಡಿದ್ದ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ವೇದಿಕೆ ಕೊಡಗಿನ ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾಗಿತ್ತು. ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟ ಕೊಡವರ ಮೆರವಣಿಗೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪೆನ್ನೇಕರ್ ಚಾಲನೆ ನೀಡಿದರು.
ಕೊಡಗಿನ ಮೂಲ ನಿವಾಸಿಗಳಾದ ಕಾಪಾಳ ಜನಾಂಗದ ಮೆರವಣಿಗೆ ಹಾಗೂ ಇದೇ ಮೊದಲ ಬಾರಿಗೆ ಕೇರಳ ಮೂಲದ ಅಜ್ಜಪ್ಪತೆರೆಯನ್ನು ವಿಶೇಷವಾಗಿ ಹಮ್ಮಿಕೊಳ್ಳಲಾಗಿತ್ತು. ಗೋಣಿಕೊಪ್ಪದ ಮುಖ್ಯ ರಸ್ತೆಯಿಂದ ಕಾವೇರಿ ಕಾಲೇಜಿನವರೆಗೆ ವಿವಿಧ ಸಾಂಸ್ಕೃತಿಕ ಕಲಾ ತಂಡಗಳು ಹೆಜ್ಜೆ ಹಾಕಿದವು. ಕಾವೇರಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಭಾ ವೇದಿಕೆಯಲ್ಲಿ ಸ್ಥಳೀಯ ಆಚಾರ- ವಿಚಾರ, ಕಲೆ, ಸಾಹಿತ್ಯ ಬಿಂಬಿಸುವ ಬೊಳ್ಕಾಟ್, ಉಮ್ಮತ್ತಾಟ್, ಉರುಟ್ಟಿಕೊಟ್ಟಾಟ್, ಕತ್ತಿಯಾಟ್ ಹಾಗೂ ಪರೆಯಕಳಿ, ಚೌರಿಯಾಟ್ ಸೇರಿದಂತೆ ಹಲವು ನೃತ್ಯ ರೂಪಕಗಳು ನೆರೆದಿದ್ದ ಕಲಾ ರಸಿಕರನ್ನು ರಂಜಿಸಿದವು.
ಪೂರ್ವಜರು ಬಿಟ್ಟು ಹೋಗಿರುವ ಕಲೆ, ಸಂಸ್ಕೃತಿಯನ್ನು ಮುಂದಿನ ಜನಾಂಗಕ್ಕೆ ಪರಿಚಯಿಸುತ್ತಿದ್ದೇವೆ. ಪ್ರತಿಯೊಂದು ಸಮುದಾಯಕ್ಕೂ ತನ್ನದೇ ಪದ್ಧತಿ ಇರುತ್ತದೆ. ಕೊಡಗಿನ ಸಾಂಪ್ರದಾಯಿಕ ನೃತ್ಯಗಳು, ಪೂರ್ವಜರು ಬಳಸುತ್ತಿದ್ದ ಪರಿಕರಗಳು ಮತ್ತು ಅಪರೂಪದ ಚಿತ್ರಕಲೆಗಳನ್ನು ವಸ್ತುಪ್ರದರ್ಶನಕ್ಕೆ ಇಡಲಾಗಿದೆ. ಕೊಡವ ಸಾಹಿತ್ಯ ಪ್ರಾರಂಭವಾಗಿ 25 ವರ್ಷಗಳು ಪೂರೈಸಿದೆ. ಈ ಹಿನ್ನೆಲೆಯಲ್ಲಿ ಉತ್ಸವದ ರೀತಿ ಎರಡು ದಿನ ಸಾಹಿತ್ಯದ ಬೆಳ್ಳಿಹಬ್ಬ ಆಚರಿಸುತ್ತಿದ್ದೇವೆ. ಬೆಳ್ಳಿಹಬ್ಬಕ್ಕೆ ರಾಜ್ಯ ಸರ್ಕಾರದಿಂದ 25 ಲಕ್ಷ ಕೇಳಿದ್ದೆವು. ಚುನಾವಣಾ ಪ್ರಕ್ರಿಯೆ ಇದ್ದಿದ್ದರಿಂದ ನೆರವೇರಲಿಲ್ಲ. ಈಗಾಗಲೇ ಜಿಲ್ಲಾಧಿಕಾರಿಗೆ ವಿರಾಜಪೇಟೆ ತಾಲೂಕಿನ ಬಳಿ 10 ಎಕರೆ ಜಾಗದಲ್ಲಿ ಸಾಂಸ್ಕೃತಿಕ ಗ್ರಾಮ ನಿರ್ಮಿಸಲು ಸ್ಥಳಾವಕಾಶ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದ್ದೇವೆ ಎಂದು ಕೊಡವ ಅಕಾಡೆಮಿ ಅಧ್ಯಕ್ಷ ಕೆ.ಪೊನ್ನಪ್ಪ ತಿಳಿಸಿದ್ದಾರೆ.