ETV Bharat Karnataka

ಕರ್ನಾಟಕ

karnataka

ETV Bharat / state

ಬೆಟ್ಟಗುಡ್ಡ ಕೊರೆದು ಕಾಮಗಾರಿ: ಪ್ರವಾಸಿಗರ ಸ್ವರ್ಗ ರಾಜಾಸೀಟ್​​ಗೆ ಎದುರಾಗಲಿದ್ಯಾ ಕಂಟಕ! - ಮಡಿಕೇರಿಯ ರಾಜಾಸೀಟ ಲೇಟೆಸ್ಟ್ ಸುದ್ದಿ

ಮಂಜಿನ ನಗರಿ ಮಡಿಕೇರಿಯ ಪ್ರಸಿದ್ಧ ಪ್ರವಾಸಿಸ್ಥಳ ರಾಜಾಸೀಟ್ ಅಭಿವೃದ್ಧಿ ಕಾಮಗಾರಿ ಭರದಿಂದ ಸಾಗಿದೆ. ಆದರೆ, ಬೆಟ್ಟಗುಡ್ಡಗಳೆನ್ನೆಲ್ಲಾ ಕೊರೆದು ರಾಜಾಸೀಟಲ್ಲಿ ಅಭಿವೃದ್ಧಿ ಕಾಮಗಾರಿ ನಡೆದಿದ್ದು, ಅಭಿವೃದ್ಧಿಯ ಹೆಸರಲ್ಲಿ ರಾಜಾಸೀಟ್ ಉದ್ಯಾನವನಕ್ಕೆ ಕಂಟಕ ಕಾದಿದೆ ಎಂದು ಸ್ಥಳೀಯರು ಆತಂಕ ಹೊರಹಾಕುತ್ತಿದ್ದಾರೆ.

Madikeri
Madikeri
author img

By

Published : Jun 21, 2021, 9:57 PM IST

Updated : Jun 21, 2021, 10:20 PM IST

ಕೊಡಗು:ಪ್ರವಾಸಿಗರ ಸ್ವರ್ಗ ಮಡಿಕೇರಿಯ ಆಕರ್ಷಣೆ ಕೇಂದ್ರ ರಾಜಾಸೀಟ್​ಗೆ​ ಕಂಟಕ ಶುರುವಾಗಿದೆ. ಪ್ರಕೃತಿ ವಿಕೋಪದಿಂದ ತತ್ತರಿಸಿರುವ ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ವರ್ಷದಿಂದ ಸಾಕಷ್ಟು ಅನಾಹುತ ಸಂಭವಿಸಿದೆ. ಹಲವು ಕಡೆ ಬೆಟ್ಟ,ಗುಡ್ಡಗಳು ಕುಸಿದು ಅಲ್ಲಿನ ಜನ ಇನ್ನೂ ಕೂಡ ಭಯದಲ್ಲೇ ಜೀವನ ಸಾಗಿಸ್ತಿದ್ದಾರೆ.

ಇದರ ನಡುವೆಯೂ ಬೆಟ್ಟದ ಮೇಲಿರುವ ಮಡಿಕೇರಿಯ ರಾಜಾಸೀಟಲ್ಲಿ ಅಭಿವೃದ್ಧಿ ಕಾಮಗಾರಿ ಆರಂಭಿಸುವ ಮೂಲಕ ಪ್ರವಾಸೋದ್ಯಮ ಇಲಾಖೆ ಜನ್ರ ಕೆಂಗಣ್ಣಿಗೆ ಗುರಿಯಾಗಿತ್ತು. ವಿರೋಧದ ನಡುವೆಯೂ ಕಾಮಗಾರಿ ಮುಕ್ತಾಯದ ಹಂತಕ್ಕೆ ಬಂದಿದ್ದು ಇದೀಗ ಮತ್ತೆ ಈ ಯೋಜನೆಯ ಬಗ್ಗೆ ಅಪಸ್ವರ ಎದ್ದಿದೆ.

ಬೆಟ್ಟಗುಡ್ಡ ಕೊರೆದು ಕಾಮಗಾರಿ

ಬೆಟ್ಟದ ಕೆಳಗಿನ ಜನರಲ್ಲಿ ಹೆಚ್ಜಿದ ಆತಂಕ:

ಜಲಸ್ಫೋಟದಿಂದಾಗಿ ಬೆಟ್ಟಗುಡ್ಡಗಳು ಕುಸಿದು ಜನಜೀವನ ಅಸ್ತವ್ಯಸ್ತವಾಗಿತ್ತು. ಸಾಕಷ್ಟು ಕಡೆಗಳಲ್ಲಿ ಬೆಟ್ಟಗಳು ಕುಸಿದು ಹಲವು ಜನರು ಪ್ರಾಣ ಕಳೆದುಕೊಂಡಿದ್ದಾರೆ. ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದಲ್ಲಿ ಅರಣ್ಯ ಇಲಾಖೆ ಇಂಗು ಗುಂಡಿ ತೆಗೆದ ಪರಿಣಾಮ ಗಜಗಿರಿ ಬೆಟ್ಟಕುಸಿದು ಅರ್ಚಕರ ಕುಟುಂಬದ ಐದು ಜನರು ಜಲಸಮಾಧಿಯಾಗಿದ್ದರು.

ಇದರ ನಡುವೆ ಮಡಿಕೇರಿಯಲ್ಲಿ ಬೆಟ್ಟದ ಮೇಲಿರುವ ರಾಜಾಸೀಟಲ್ಲಿ 3.2 ಕೋಟಿ ರೂ ವೆಚ್ಚದಲ್ಲಿ ವೀವ್ ಪಾಯಿಂಟ್ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಜೆಸಿಬಿ ಯಂತ್ರದ ಮೂಲಕ ಈ ಕಾಮಗಾರಿಯನ್ನು ಆರಂಭಿಸಲಾಗಿತ್ತು. ಆದರೆ, ಇದಕ್ಕೆ ಜನತೆಯ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಯಂತ್ರದ ಬದಲಾಗಿ ಕಾರ್ಮಿಕರ ಮೂಲಕವೇ ಕಾಮಗಾರಿಯನ್ನ ಮುಗಿಸುವಂತೆ ಜಿಲ್ಲಾಡಳಿತ ಸೂಚಿಸಿತ್ತು. ಇದೀಗ ಈ ಕಾಮಗಾರಿ ಮುಕ್ತಾಯದ ಹಂತಕ್ಕೆ ಬಂದಿದ್ದರೂ ಜನರಿಂದ ವಿರೋಧ ವ್ಯಕ್ತವಾಗುತ್ತಿದೆ.

ವೀವ್ ಪಾಯಿಂಟ್ ಕಾಮಗಾರಿ:

ಮಡಿಕೇರಿಯ ರಾಜಾಸೀಟ್​ನಲ್ಲಿ ನಡೆಯುತ್ತಿರುವ ವೀವ್ ಪಾಯಿಂಟ್ ಯೋಜನೆ ಇಲ್ಲಿನ ಪ್ರವಾಸಿತಾಣಕ್ಕೆ ಮತ್ತಷ್ಟು ಮೆರಗು ನೀಡಲಿದೆ. ಈಗಾಗಲೇ ಇಲ್ಲಿ ಗಿಡಗಳನ್ನು ನೆಡುವ ಕಾರ್ಯ,‌ಲಾನ್ ವಾಕಿಂಗ್ ಪಾತ್ ನಿರ್ಮಾಣವಾಗುತ್ತಿದೆ. ಕಾಮಗಾರಿ ಪೂರ್ಣಗೊಂಡ ಮೇಲೆ ಇಲ್ಲಿನ ಪ್ರಕೃತಿ ಸೌಂದರ್ಯ ಸವಿಯಲು ಬರುವವರಿಗೆ ಉತ್ತಮ ಅನುಭವ ಪಡೆಯಲು ಅವಕಾಶ ಸಿಕ್ಕಂತಾಗುತ್ತೆ ಎನ್ನುವುದು ಇಲಾಖೆಯ ಅಂದಾಜು.

ಆದರೆ, ರಾಜಾಸೀಟ್ ಕೆಳಭಾಗದಲ್ಲಿ ಮೈಸೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಹಾದುಹೋಗುತ್ತದೆ. ಇಲ್ಲಿ ಕಳೆದ ಬಾರಿ ಗುಡ್ಡ ಕುಸಿತವಾಗಿದೆ. ರಾಜಾಸೀಟ್​​ಗೆ ಹೊಂದಿಕೊಂಡಿರುವ ಚಾಮುಂಡೇಶ್ವರಿ ನಗರ, ಮಂಗಳಾದೇವಿ ನಗರದ ನಿವಾಸಿಗಳನ್ನ ಕೂಡ ಭದ್ರತಾ ದೃಷ್ಟಿಯಿಂದ ಜಿಲ್ಲಾಡಳಿತ ತೆರವುಗೊಳಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಬೆಟ್ಟ ಅಗೆದು ಕಾಮಗಾರಿ ಮಾಡುವ ಅವಶ್ಯಕತೆಯಿತ್ತಾ? ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.

ಜಿಲ್ಲಾಧಿಕಾರಿ ಪ್ರತಿಕ್ರಿಯೆ:

ಮತ್ತೊಂದೆಡೆ ಈ ಯೋಜನೆ ಅವೈಜ್ಞಾನಿಕವಾಗಿದ್ದು ಮುಂದಿನ ದಿನಗಳಲ್ಲಿ ಗುಡ್ಡ ಕೆಳಗಿರುವ ನಿವಾಸಿಗಳಿಗೆ ಸಮಸ್ಯೆ ತರಲಿದೆ ಎನ್ನುವ ಮಾತು ಕೇಳಿಬರುತ್ತಿದೆ. ಈ ಕುರಿತು ಜಿಲ್ಲಾಧಿಕಾರಿ ಕೂಡ ಪ್ರತಿಕ್ರಿಯೆ ನೀಡಿದ್ದು, ಹಿಂದಿನ ಜಿಲ್ಲಾಡಳಿತ ನೀಡಿರುವ ನಕ್ಷೆಯಂತೆ ಯೋಜನೆ ಪೂರ್ಣಗೊಳ್ಳಲಿದೆ. ವೀವ್ ಪಾಯಿಂಟ್ ಕಾಮಗಾರಿಯಲ್ಲಿ ತಾಂತ್ರಿಕ ದೋಷವಿದ್ದಲ್ಲಿ ಅದನ್ನ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಒಟ್ಟಿನಲ್ಲಿ , ಅಭಿವೃದ್ಧಿಯ ಹೆಸರಲ್ಲಿ ರಾಜಾಸೀಟ್ ಉದ್ಯಾನವನಕ್ಕೆ ಕಂಟಕ ಕಾದಿದೆ ಎಂಬುದು ಸ್ಥಳೀಯರ ಆತಂಕ. ಒಂದು ಕಡೆ ಈ ಯೋಜನೆಯಿಂದ ರಾಜಾಸೀಟ್ ಗೆ ಮತ್ತಷ್ಟು ಜೀವಕಳೆ ಬಂದ್ರೆ ಮತ್ತೊಂದು ಕಡೆ ಪ್ರವಾಸಿ ತಾಣದ ಕೆಳಗಿರುವ ಜನರಿಗೆ ಯಾವುದೇ ಅಪಾಯ ಆಗದೇ ಇರುವ ಹಾಗೆ ಎಚ್ಚರಿಕೆ ವಹಿಸುವ ಜವಾಬ್ದಾರಿ ಜಿಲ್ಲಾಡಳಿತದ ಮೇಲಿದೆ.

Last Updated : Jun 21, 2021, 10:20 PM IST

ABOUT THE AUTHOR

...view details