ಕೊಡಗು:ಸೆಲ್ಫಿ ತೆಗೆದುಕೊಳ್ಳುವ ವೇಳೆ ಜಾರಿ ಬಿದ್ದು ನೀರುಪಾಲಾಗಿದ್ದ ಪ್ರವಾಸಿಗನ ಮೃತದೇಹ ಪತ್ತೆಯಾಗಿದೆ. ಜಿಲ್ಲೆಯ ಕುಶಾಲನಗರ ತಾಲೂಕಿನ ಹಾರಂಗಿ ಜಲಾಶಯ ಮುಂಭಾಗದ ಸೇತುವೆ ಬಳಿ ಗುರುವಾರ ಘಟನೆ ನಡೆದಿತ್ತು. ಬೆಂಗಳೂರು ಮೂಲದ ಸಂದೀಪ್ (41) ಸೆಲ್ಫಿ ಕ್ರೇಜ್ಗೆ ಪ್ರಾಣ ಕಳೆದುಕೊಂಡ ವ್ಯಕ್ತಿಯಾಗಿದ್ದು, ಶುಕ್ರವಾರ ಮಧ್ಯಾಹ್ನದ ವೇಳೆಗೆ ಮೃತದೇಹ ಪತ್ತೆಹಚ್ಚಲಾಗಿದೆ.
ಮಳೆಗಾಲದ ಪ್ರವಾಸದ ವೇಳೆ ಮುನ್ನೆಚ್ಚರಿಕೆ ವಹಿಸುವಂತೆ ಸರ್ಕಾರ, ಜಿಲ್ಲಾಡಳಿತ ಪದೇ ಪದೆ ಎಚ್ಚರಿಸುತ್ತಿದ್ದರೂ ಜನರು ಸೆಲ್ಫಿ, ಫೋಟೊ ಹಾಗೂ ವಿಡಿಯೋ ಗೀಳಿಗೆ ಬಿದ್ದು ಅವಘಡಗಳು ಸಂಭವಿಸುತ್ತಲೇ ಇವೆ. ಮೃತ ಸಂದೀಪ್ ತನ್ನ ಮೂವರು ಗೆಳೆಯರೊಂದಿಗೆ ಕಾರಿನಲ್ಲಿ ಬೆಂಗಳೂರಿನಿಂದ ಕೊಡಗು ಜಿಲ್ಲೆಗೆ ಪ್ರವಾಸಕ್ಕೆ ಎಂದು ಬಂದಿದ್ದ. ಮೈಸೂರು ಮಾರ್ಗವಾಗಿ ಕೊಡಗಿನ ಗೋಣಿಕೊಪ್ಪ ಹಾಗೂ ಹಾರಂಗಿ ಜಲಾಶಯಕ್ಕೆ ಭೇಟಿ ನೀಡಿದ್ದರು. ಗುರುವಾರ ಹಾರಂಗಿ ಜಲಾಶಯದ ಮುಂಭಾಗದ ಸೇತುವೆ ಮೇಲೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದ. ಈ ವೇಳೆ, ಸೇತುವೆ ಕಟ್ಟೆ ಮೇಲೆ ನಿಲ್ಲಲು ಮುಂದಾದ ಸಂದೀಪ್ ಆಕಸ್ಮಿಕವಾಗಿ ನದಿಗೆ ಕಾಲು ಜಾರಿ ಬಿದ್ದು ಕಣ್ಮರೆಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜಲಾಶಯದಿಂದ ಕಾವೇರಿ ನದಿಗೆ 4 ಕ್ರಸ್ಟ್ರರ್ ಗೇಟ್ ಮೂಲಕ ನೀರು ಬಿಡಲಾಗಿತ್ತು. ಇದನ್ನು ಕಂಡು ಸೆಲ್ಫಿ ತೆಗೆಯಲು ಮುಂದಾಗಿದ್ದರು. ಸೇತುವೆ ಮೇಲಿಂದ ಬಿದ್ದು ನೀರುಪಾಲಾದ ಸಂದೀಪ್ಗಾಗಿ ಗುರುವಾರ ನಿರಂತರ ಹುಡುಕಾಟ ನಡೆಸಿದರೂ ಶವ ಪತ್ತೆಯಾಗಿರಲಿಲ್ಲ. ಶುಕ್ರವಾರವೂ ಪತ್ತೆ ಕಾರ್ಯ ಮುಂದುವರೆಸಲಾಗಿದ್ದು, ಮಧ್ಯಾಹ್ನದ ಹೊತ್ತಿಗೆ ಘಟನೆ ನಡೆದ ಸ್ವಲ್ಪ ದೂರದಲ್ಲಿಯೇ ಶವವನ್ನು ಅಗ್ನಿಶಾಮಕದಳ ಹಾಗೂ ತಜ್ಞರ ತಂಡ ಪತ್ತೆ ಮಾಡಿದೆ. ಮರಣೋತ್ತರ ಪರೀಕ್ಷೆ ನಡೆಸಿ ಸಂಜೆ ವೇಳೆಗೆ ಕುಟುಂಬಸ್ಥರಿಗೆ ಶವ ಹಸ್ತಾಂತರ ಮಾಡಲಾಗಿದೆ.