ಕೊಡಗು:ದಕ್ಷಿಣ ಕೊಡಗಿನಲ್ಲಿ ಆತಂಕ ಹುಟ್ಟಿಸಿದ್ದ ನರ ಹಂತಕ ಹುಲಿ ಕೊನೆಗೂ ಗುಂಡಿಗೆ ಬಲಿಯಾಗಿದೆ. ಇದೀಗ ದಕ್ಷಿಣ ಕೊಡಗಿನ ಮಂದಿ ಕೊಂಚ ಮಟ್ಟಿಗೆ ನಿಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕಿನ ನಾಲ್ಕೇರಿ ಗ್ರಾಮದ ಲಕ್ಕುಂದ ಎಂಬಲ್ಲಿ ಹುಲಿ ಗುಂಡೇಟಿಗೆ ಬಲಿಯಾಗಿದೆ. ಕಳೆದ ಇಪ್ಪತೈದು ದಿನಗಳಿಂದ ಜಿಲ್ಲೆಯ ನಾಲ್ಕೇರಿ, ಹುದಿಕೇರಿ, ಬೆಳ್ಳೂರು, ಹರಿಹರ, ತಾವಳಗೇರಿ ಮುಂತಾದ ಕಡೆಗಳಲ್ಲಿ ಹುಲಿ ಹಾವಳಿ ಹೆಚ್ಚಾಗಿದ್ದು, ಇಬ್ಬರನ್ನ ಬಲಿಪಡೆದುಕೊಂಡಿತ್ತು. ಇದರಿಂದ ಅರಣ್ಯ ಇಲಾಖೆ ವಿರುದ್ಧ ಸಾರ್ವಜನಿಕರು ಪ್ರತಿಭಟನೆ ಮೂಲಕ ಆಕ್ರೋಶ ಹೊರ ಹಾಕಿದ್ದರು. ಇದರಿಂದ ಅರಣ್ಯ ಇಲಾಖೆ ಕೂಬಿಂಗ್ ಮತ್ತಷ್ಟು ಚುರುಕುಗೊಳಿಸಿತ್ತು.
ಮಾರ್ಚ್ 8 ರಂದು ಬೆಳ್ಳೂರು ಭಾಗದಲ್ಲಿ ಅನೆ ಕಾರ್ಯಚರಣೆ ವೇಳೆ ಹುಲಿಗೆ ಗುಂಡು ಹೊಡೆಯಲಾಗಿತ್ತು. ಆದರೆ, ಅದು ಗುಂಡು ಹಾರಿಸಿದ ಸ್ಥಳದಿಂದ ಸುಮಾರು 8 ರಿಂದ 10 ಕಿ.ಮೀ ದೂರದಲ್ಲಿ ಸತ್ತು ಬಿದ್ದಿದೆ. ಮೂರು ಗುಂಡೇಟು ತಿಂದ ಹುಲಿ ನಾಗರಹೊಳೆ ಬಳಿಯ ಲಕ್ಕುಂದ ಎಸ್ಟೇಟ್ ಬಳಿ ಹುಲಿ ದೇಹ ಪತ್ತೆಯಾಗಿದೆ.
ನರಹಂತಕ ಹುಲಿ ಗುಂಡೇಟಿಗೆ ಬಲಿ ಇಂದು ಮುಂಜಾನೆ ಅರಣ್ಯ ಇಲಾಖೆಯ ಸಿಬ್ಬಂದಿ ಗಸ್ತು ತಿರುಗುತ್ತಿದ್ದ ವೇಳೆ ದುರ್ವಾಸನೆ ಬಂದ ಹಿನ್ನೆಲೆ ಹುಡುಕಾಟ ನಡೆಸಿದ ಸಂದರ್ಭ ಹುಲಿ ಸಾವನ್ನಪ್ಪಿದ್ದು ಬೆಳಕಿಗೆ ಬಂದಿದೆ. ಸುಮಾರು 11 ವರ್ಷದ ಗಂಡು ಹುಲಿ ಇದಾಗಿದ್ದು, ಹುಲಿಯ ಐಡಿ Nagarahole 13_U285 ಆಗಿದೆ. ಅಲ್ಲದೇ ಇದರ ಮೈಯಲ್ಲಿ ಅರಣ್ಯ ಇಲಾಖೆ ಹಾರಿಸಿದ ಗುಂಡು ಕೂಡ ಪತ್ತೆಯಾಗಿದೆ ಎಂದು ಅರಣ್ಯ ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.
ಇಷ್ಟು ದಿನಗಳ ಕಾಲ ಜನರಲ್ಲಿ ಭಯ ಹುಟ್ಟಿಸುತ್ತಿದ್ದ ನರ ಹಂತಕ ಹುಲಿ ಕೊನೆಗೂ ಅರಣ್ಯ ಇಲಾಖೆಯ ಗುಂಡಿಗೆ ಬಲಿಯಾಗಿದ್ದು, ದಕ್ಷಿಣ ಕೊಡಗಿನ ಮಂದಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.