ಕೊಡಗು:ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರು ಪಾಲಾಗಿರುವ ಘಟನೆ ಕೊಡಗು ಜಿಲ್ಲೆಯ ಬರಪೊಳೆಯಲ್ಲಿ ನಡೆದಿದೆ.
ಪೊನ್ನಂಪೇಟೆ ಸಿಇಟಿ ಕಾಲೇಜಿನ ಎಂಜಿನಿಯರಿಂಗ್ ವಿದ್ಯಾರ್ಥಿಗಳಾದ, ಆಕಾಶ್ ಬಿದ್ದಪ್ಪ, ಉಳುವಂಗಡ ಸುದೇಶ್ ಅಯ್ಯಪ್ಪ, ರಶಿಕ್ ಮೃತ ವಿದ್ಯಾರ್ಥಿಗಳು ಎಂದು ಗುರುತು ಪತ್ತೆ ಹಚ್ಚಲಾಗಿದೆ. ಶನಿವಾರ ಬೆಳಗ್ಗೆ ಕಾಲೇಜಿಗೆ ಬಂದಿದ್ದ ವಿದ್ಯಾರ್ಥಿಗಳು ಕಾಲೇಜು ಮುಗಿಸಿ ನಾಲ್ವರು ಸೇರಿ ಪೊನ್ನಂಪೇಟೆ ತಾಲ್ಲೂಕಿನ ಅರ್ಜಿ ಗ್ರಾಮದ ಬರಪೊಳೆ ನದಿಯಲ್ಲಿ ಈಜಲು ತೆರಳಿದ್ದರು. ಈ ವೇಳೆ ಈಜಲು ನೀರಿಗೆ ಇಳಿದ ಮೂವರು ವಿದ್ಯಾರ್ಥಿಗಳು ಆಳವಾದ ಜಾಗದಲ್ಲಿ ಸಿಲುಕಿ ಈಜಲು ಬಾರದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಒಬ್ಬ ವಿದ್ಯಾರ್ಥಿ ನೀರಿಗೆ ಇಳಿಯದೇ ದಡದಲ್ಲಿದ್ದು ಬದುಕುಳಿದಿದ್ದಾನೆ.
ಮೂವರು ನೀರಿನಲ್ಲಿ ಮುಳುಗುವ ವೇಳೆ ದಡದಲ್ಲಿದ್ದ ವಿದ್ಯಾರ್ಥಿ ಸಹಾಯಕ್ಕಾಗಿ ಕೂಗಾಡಿದ್ದಾನೆ. ಆದ್ರೆ ಸುತ್ತಲೂ ಯಾರೂ ಇರದ ಕಾರಣ ಮೂವರು ಮುಳುಗಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಪೊನ್ನಂಪೇಟೆ ಠಾಣಾ ಪೊಲೀಸರು ಭೇಟಿ ನೀಡಿ ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಸಾಗಿಸಿದ್ದಾರೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಇತ್ತೀಚಿನ ಘಟನೆ-ಈಜಲು ತೆರಳಿದ್ದ ಬಾಲಕರು ನೀರುಪಾಲು:ಈಜಲು ತೆರಳಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಗಾಳಪೂಜಿ ಗ್ರಾಮದಲ್ಲಿ ಭಾನುವಾರ ನಡೆದಿತ್ತು. ನಾಗರಾಜ್ ಮಾರುತಿ ಲಂಕೇಶ್ ಮತ್ತು ಹೇಮಂತ್ ಮಾಲತೇಶ್ ಹರಿಜನ್ ಮೃತ ಬಾಲಕರು. ಕೆರೆ ದುರಸ್ತಿ ಕಾರ್ಯ ನಡೆಯುತ್ತಿದ್ದು, ಆಳ ತಿಳಿಯದೆ ಕೆರೆಗಿಳಿದ ಮಕ್ಕಳು ಮುಳುಗಿ ಸಾವನ್ನಪ್ಪಿದ್ದರು.
ನೀರಿನ ಸುಳಿಗೆ ಸಿಲುಕಿ ಯುವಕ ಸಾವು (ಶಿರಸಿ):ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮುರೇಗಾರ್ ಫಾಲ್ಸ್‌ನಲ್ಲಿ ಸ್ನಾನಕ್ಕೆಂದು ಹೊಳೆಗಿಳಿದಾಗ ನೀರಿನ ಸುಳಿಗೆ ಸಿಲುಕಿ ಯುವಕ ಮೃತಪಟ್ಟ ಘಟನೆ ಇತ್ತೀಚೆಗೆ ನಡೆದಿತ್ತು. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಇನಾಮಪುರದ ಫೈನಾನ್ಸ್ ಉದ್ಯೋಗಿ ದಾನೇಶ ದೊಡ್ಮನಿ ಮೃತ ಎಂದು ಗುರುತು ಪತ್ತೆ ಹಚ್ಚಲಾಗಿತ್ತು. ಇವರು ತಮ್ಮ 6 ಮಂದಿ ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ಶಿರಸಿ ತಾಲೂಕಿನ ಸಾಲ್ಕಣಿ ಪಂಚಾಯತ್ ವ್ಯಾಪ್ತಿಯ ಮುರೇಗಾರ್ ಫಾಲ್ಸ್‌ಗೆ ತೆರಳಿದ್ದರು. ಸ್ನಾನಕ್ಕೆಂದು ನೀರಿಗಿಳಿದಾಗ ಸುಳಿಗೆ ಸಿಲುಕಿ ಮುಳುಗಿ ಸಾವನ್ನಪ್ಪಿದ್ದರು. ಶಿರಸಿ ಗ್ರಾಮೀಣ ಠಾಣೆಯ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕಿಯರು ಮುಳುಗಿ ಸಾವು