ಕೊಡಗು :ಪ್ರವಾಸಿಗರ ಸ್ವರ್ಗ, ಹಚ್ಚ ಹಸಿರ ಬೆಟ್ಟ ಗುಡ್ಡಗಳ ಸುಂದರ ಪ್ರಕೃತಿಯ ತವರು ಕೊಡಗಿನಲ್ಲಿ 3ನೇ ಸಾಕಾನೆ ಶಿಬಿರ ಲೋಕಾರ್ಪಣೆಗೊಂಡಿದೆ. ಜಿಲ್ಲೆಯ ಪ್ರವಾಸೋದ್ಯಮದಲ್ಲಿ ಮತ್ತೊಂದು ಮೈಲಿಗಲ್ಲಿಗೆ ಸಾಕ್ಷಿಯಾಗಿದೆ. ಕೊಡಗು ಪ್ರವಾಸೋದ್ಯಮಕ್ಕೆ ಮತ್ತೊಂದು ಗರಿ ಎಂಬಂತೆ ಕೊಡಗಿನಲ್ಲಿ ಸಾಕಾನೆ ಶಿಬಿರ ತೆರೆದಿರೋದು ಪ್ರವಾಸಿಗರಿಗೆ ಸಂತಸ ಮೂಡಿಸಿದೆ.
ಕೊಡಗು ಜಿಲ್ಲೆಯ ಕುಶಾಲನರ ತಾಲೂಕಿನ ಹಾರಂಗಿ ಜಲಾಶಯದ ಪಕ್ಕದಲ್ಲಿ ನೂತನವಾಗಿ ಹಾರಂಗಿ ವೃಕ್ಷೋದ್ಯಾನ ಮತ್ತು ಸಾಕಾನೆ ಶಿಬಿರ ಲೋಕಾರ್ಪಣೆಯಾಗಿದೆ. ಇಲ್ಲಿಯವರೆಗೆ ದುಬಾರೆ ಹಾಗೂ ಮತ್ತಿಗೋಡು ಎಂಬ ಎರಡು ಸಾಕಾನೆ ಶಿಬಿರಗಳಿದ್ದವು. ದುಬಾರೆ ಸಾಕಾನೆ ಶಿಬಿರದಲ್ಲಿ ಬರೋಬ್ಬರಿ 32 ಸಾಕಾನೆಗಳಿದ್ದವು. ಆನೆಗಳ ಒತ್ತಡ ತಡೆದುಕೊಳ್ಳಲು ಶಿಬಿರಕ್ಕೆ ಆಗದ ಕಾರಣ ಮತ್ತು ಸಾಕಾನೆ ಶಿಬಿರದಲ್ಲಿ ಇಂತಿಷ್ಟೇ ಆನೆಗಳಿರಬೇಕು ಎಂಬ ಸುಪ್ರಿಂಕೋರ್ಟ್ ನೀಡಿದ ಆದೇಶದ ಹಿನ್ನೆಲೆಯಲ್ಲಿ ಕೊಡಗಿನ ಹಾರಂಗಿ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ನೂತನ ಸಾಕಾನೆ ಶಿಬಿರ ತೆರೆಯಲಾಗಿದೆ. ಈಗಾಗಲೇ ದುಬಾರೆಯಿಂದ 7 ಸಾಕಾನೆಗಳನ್ನೂ ಶಿಫ್ಟ್ ಮಾಡಲಾಗಿದೆ. ಆ ಮೂಲಕ ಹಾರಂಗಿ ಸಾಕಾನೆ ಶಿಬಿರ ಕಾರ್ಯಾರಂಭ ಮಾಡಿದೆ.