ಮಡಿಕೇರಿ : ನಾಲ್ಕು ದಿನಗಳ ಹಿಂದೆ ಕಣ್ಮರೆಯಾಗಿದ್ದ ವೃದ್ಧ ಮಹಿಳೆಯನ್ನು ಗ್ರಾಮಸ್ಥರು ಪತ್ತೆ ಹಚ್ಚಿರುವ ಘಟನೆ ನಡೆದಿದೆ. ಅಚ್ಚರಿ ಎಂದರೆ ನಾಲ್ಕು ದಿನಗಳ ಕಾಲ ವೃದ್ಧೆ ಚಳಿ, ಮಳೆಗೆ ಬೆಟ್ಟದ ಪೊದೆಯೊಂದರ ಬಳಿ ಬಂಧಿ ಆಗಿದ್ದು, ಇವರ ಜೀವ ಉಳಿದಿದ್ದೇ ಗ್ರಾಮಸ್ಥರಿಗೆ ವಿಸ್ಮಯ ಮೂಡಿಸಿದೆ.
ಕಳೆದ ಬುಧವಾರ ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮ೦ಜಾಟ್ ಕಾಲೋನಿಯ ನಿವಾಸಿ ಸೀತಮ್ಮ(80) ಸ೦ಬಂಧಿಕರ ಮನೆಯಿಂದ ತಮ್ಮ ಮನೆಗೆ ಹೊರಟಿದ್ದರು. ಈ ಸಂದರ್ಭ ದಾರಿ ತಪ್ಪಿದ್ದು, ಮನೆಗೆ ವಾಪಸ್ ಆಗಿರಲಿಲ್ಲ. ನಾಲ್ಕು ದಿನಗಳಾದರೂ ಮನೆಗೆ ಬಾರದ ವೃದ್ಧೆಯನ್ನು ಸಂಬಂಧಿಕರು ಹಾಗೂ ಗ್ರಾಮಸ್ಥರು ಸೇರಿ ಸುತ್ತಮುತ್ತಲಿನ ಕಾಡಿನಲ್ಲಿ ಹುಡುಕಾಟ ನಡೆಸಿದ್ದರು. ಆದರೂ ಸೀತಮ್ಮ ಪತ್ತೆಯಾಗಿರಲಿಲ್ಲ.