ಕೊಡಗು: ಕಾಡಿನಲ್ಲಿರುವ ಆದಿವಾಸಿ ಮಕ್ಕಳಿಗೆ ಶಿಕ್ಷಣ ನೀಡಿ ಉತ್ತಮ ಜೀವನ ರೂಪಿಸಲು ಐಟಿಡಿಪಿ ಇಲಾಖೆ ಮುಂದಾಗಿದ್ದು, ಶಿಕ್ಷಕರು ಮನೆಗಳಿಗೆ ತೆರಳಿ ಮಕ್ಕಳಿಗೆ ಪಾಠ ಹೇಳಿ ಕೊಡುತ್ತಿದ್ದಾರೆ. ಈ ಮೂಲಕ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕೆಂಬ ಗುರಿ ಈಡೇರುತ್ತಿದೆ.
ಕೊಡಗು-ಮೈಸೂರು ಗಡಿಯ ಭಾಗದ ನಾಗರಹೊಳೆ ಅಭಯಾರಣ್ಯದಲ್ಲಿರುವ ಬಹುತೇಕ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದರು. ಇದನ್ನು ಗಮನಿಸಿ ಐಟಿಡಿಪಿ ಇಲಾಖೆ ಕಳೆದ ಕೆಲವು ವರ್ಷಗಳಿಂದ ಆದಿವಾಸಿ ಮಕ್ಕಳಿಗೆ ಶಿಕ್ಷಣ ಕೊಡಿಸಲು ಮುಂದಾಗಿತ್ತು. ಆದ್ರೆ ಕೊರೊನಾ ಕಾರಣದಿಂದಾಗಿ ಕಳೆದ ಮಾರ್ಚ್ ತಿಂಗಳಿನಿಂದ ಈ ಮಕ್ಕಳು ಶಾಲೆ ಮುಖವನ್ನೇ ನೋಡಿಲ್ಲ. ಮಾತ್ರವಲ್ಲ, ಅದುವರೆಗೆ ಕಲಿತಿದ್ದನ್ನೆಲ್ಲಾ ಮರೆತು ಬಿಟ್ಟಿದ್ದರು.
ಆದಿವಾಸಿ ಮಕ್ಕಳ ಜೊತೆ ಶಿಕ್ಷಕರು ಇದನ್ನು ಗಮನಿಸಿದ ಐಟಿಡಿಪಿ ತಾಲೂಕು ಅಧಿಕಾರಿ ಗುರುಶಾಂತಪ್ಪ, ತಮ್ಮ ಶಿಕ್ಷಕರಿಗೆ ಕಾಡಿನೊಳಗಿನ ಹಾಡಿಗೆ ತೆರಳಿ ಪಾಠ ಮಾಡುವಂತೆ ಸೂಚಿಸಿದ್ದರು. ಅದರಂತೆ ಸುಮಾರು 25 ಮಂದಿ ಶಿಕ್ಷಕರು ದಿನಕ್ಕೊಂದು ಹಾಡಿಗೆ ಭೇಟಿ ನೀಡಿ ಮಕ್ಕಳಿಗೆ ಅವರದ್ದೇ ಮನೆ ಜಗಲಿ, ಅಂಗಳದಲ್ಲಿ ಪಾಠ ಮಾಡುತ್ತಿದ್ದಾರೆ.
ವಿರಾಜಪೇಟೆ ತಾಲೂಕಿನಾದ್ಯಂತ 300ಕ್ಕೂ ಅಧಿಕ ಹಾಡಿ ಮಕ್ಕಳಿದ್ದು, ಅವರಿಗೆಲ್ಲ ಶಿಕ್ಷಣ ಕಲಿಸಲಾಗುತ್ತಿದೆ. ಈ ಮಕ್ಕಳ ಬಳಿ ಆನ್ಲೈನ್ ತರಗತಿಗಳನ್ನು ಕೇಳಲು ಮೊಬೈಲ್ ಇಲ್ಲ. ಇದನ್ನು ಸರಿಪಡಿಸಲು ಗಿರಿಜನ ಕಲ್ಯಾಣ ಇಲಾಖೆ, ಶಿಕ್ಷಕರನ್ನೇ ಹಾಡಿಗೆ ಕಳುಹಿಸಿ ಪಾಠ ಕಲಿಸುತ್ತಿದೆ. ಈ ಮೂಲಕ ಐಟಿಡಿಪಿ ಇಲಾಖೆ ಈ ಮಕ್ಕಳ ಬಾಳಲ್ಲಿ ಹೊಸ ಭರವಸೆ ಮೂಡಿಸಿದೆ.
ಇದನ್ನೂ ಓದಿ:ನಾ ಹಣ ಕೊಟ್ಟಿಲ್ಲ ಅಂದ್ರೆ ಪೂರಕ ಅಂದಾಜು ಯಾಕಿರೋದು?; ಕುಮಾರಸ್ವಾಮಿಗೆ ಸಿದ್ದರಾಮಯ್ಯ ತಿರುಗೇಟು