ಕರ್ನಾಟಕ

karnataka

ETV Bharat / state

ಭೂಕುಸಿತಕ್ಕೆ ಸ್ವಯಂಕೃತ ಅಪರಾಧವೇ ಕಾರಣ: ತಲಕಾವೇರಿ ಮೂಲಸ್ವರೂಪ ರಕ್ಷಣಾ ಸಮಿತಿ ಆರೋಪ - ಕೊಡಗು ಸುದ್ದಿ

ಕಾವೇರಿ ನದಿ ತನ್ನೊಡಲ ಜನರಿಗೆ ಸಂಕಷ್ಟ ತಂದಿಟ್ಟಿರುವುದಕ್ಕೆ ಜನರ ಸ್ವಯಂಕೃತ ಅಪರಾಧವೇ ಕಾರಣ ಅಂತ ತಲಕಾವೇರಿ ಮೂಲಸ್ವರೂಪ ರಕ್ಷಣಾ ಸಮಿತಿ ಆರೋಪ ಮಾಡಿದೆ.

Talakaveri landslide is an automatic crime
ಭೂಕುಸಿತಕ್ಕೆ ಸ್ವಯಂಕೃತ ಅಪರಾಧವೇ ಕಾರಣ: ತಲಕಾವೇರಿ ಮೂಲಸ್ವರೂಪ ರಕ್ಷಣಾ ಸಮಿತಿ ಆರೋಪ

By

Published : Aug 14, 2020, 9:24 PM IST

ತಲಕಾವೇರಿ(ಕೊಡಗು): ಕೊಡಗಿನ ಕುಲದೇವತೆಯ ಉಗಮಸ್ಥಾನ ತಲಕಾವೇರಿಯಲ್ಲಿ ತೀರ್ಥರೂಪಿಣಿಯಾದ ಕಾವೇರಿ ಮಾತೆಗೆ, ದೇವಾಲಯದ ಇತಿಹಾಸದಲ್ಲಿ ಎಂದೂ ಕೂಡ ಪೂಜೆ ನಿಂತಿರಲಿಲ್ಲ. ಆದರೆ, ಗಜರಾಜಗಿರಿಬೆಟ್ಟ ಕುಸಿದ ಪರಿಣಾಮ ಎಂಟು ದಿನಗಳಿಂದ ಧೂಪವನ್ನು ಹಾಕಿಲ್ಲ. ಇಡೀ ಬೆಟ್ಟ ಕುಸಿದ ಪರಿಣಾಮ ಅರ್ಚಕರ ಕುಟುಂಬ ಕಣ್ಮರೆಯಾಗಿದೆ. ಇದಕ್ಕೆಲ್ಲಾ ಸ್ವಯಂಕೃತ ಅಪರಾಧವೇ ಕಾರಣ ಎನ್ನಲಾಗುತ್ತಿದೆ.

ಭೂಕುಸಿತಕ್ಕೆ ಸ್ವಯಂಕೃತ ಅಪರಾಧವೇ ಕಾರಣ: ತಲಕಾವೇರಿ ಮೂಲಸ್ವರೂಪ ರಕ್ಷಣಾ ಸಮಿತಿ ಆರೋಪ

ತಲಕಾವೇರಿಯಲ್ಲಿ ಹುಟ್ಟಿ ನಾಡಿನುದ್ದಕ್ಕೂ ಹರಿಯುವ ಜೀವನದಿ ಕಾವೇರಿ. ಆದರೆ, ಕೊಡಗಿನ ಜನರಿಗೆ ಮಾತ್ರ ಅದ್ಯಾಕೋ ಕಣ್ಣೀರು ತರಿಸುತ್ತಿದ್ದಾಳೆ. ಕಾವೇರಿ ನದಿ ಹೀಗೆ ತನ್ನೊಡಲ ಜನರಿಗೆ ಸಂಕಷ್ಟ ತಂದಿಟ್ಟಿರುವುದಕ್ಕೆ ಜನರ ಸ್ವಯಂಕೃತ ಅಪರಾಧವೇ ಕಾರಣ ಅಂತ ತಲಕಾವೇರಿ ಮೂಲಸ್ವರೂಪ ರಕ್ಷಣಾ ಸಮಿತಿ ಆರೋಪ ಮಾಡಿದೆ. 2005ರಲ್ಲಿ ತಲಕಾವೇರಿಯಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಹಲವು ಕಾಮಗಾರಿಗಳನ್ನು ಮಾಡಲಾಯಿತು. ಕಾವೇರಿ ಬ್ರಹ್ಮಗಿರಿ ಬೆಟ್ಟದಲ್ಲಿ ಹುಟ್ಟಿ, ಬ್ರಹ್ಮಕುಂಡಿಕೆಯಲ್ಲಿ ತೀರ್ಥ ರೂಪಿಣಿಯಾಗುತ್ತಿದ್ದಳು. ಆದರೆ, ಅಭಿವೃದ್ಧಿ ಹೆಸರಿನಲ್ಲಿ ಬ್ರಹ್ಮಕುಂಡಿಕೆ ಮತ್ತು ತೀರ್ಥ ಕೊಳಗಳಿಗೆ ಕಲ್ಲು ಮತ್ತು ಸಿಮೆಂಟ್​ನಿಂದ ಕಾಮಗಾರಿ ಮಾಡಲಾಯಿತು. ಇದರಿಂದಾಗಿ ಕಾವೇರಿ ಜಲಮೂಲವೇ ಬದಲಾಯಿತು. ಇದರಿಂದಾಗಿ ಇಡೀ ಬೆಟ್ಟವೇ ಕುಸಿದು ಇಂತಹ ಘನಗೋರ ಸ್ಥಿತಿ ನಿರ್ಮಾಣವಾಗಿದೆ ಅಂತಾ ಸಮಿತಿ ಮುಖಂಡರು ಗಂಭೀರ ಆರೋಪ ಮಾಡುತ್ತಿದ್ದಾರೆ.

ತಲಕಾವೇರಿಯಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಮಾಡಿದ ಕಾಮಗಾರಿಯಿಂದ ಜಲಮೂಲ ದಿಕ್ಕು ಬದಲಾಯಿಸಿ, ಕುಸಿದಿರುವ ಗಜಗಿರಿಬೆಟ್ಟದ ಕಡೆಗೆ ಭೂಮಿಯೊಳಗೆ ಹರಿಯಲು ಆರಂಭಿಸಿತ್ತು. ಈ ಕುರಿತು ಅಷ್ಟಮಂಗಲ ಪ್ರಶ್ನೆಯಲ್ಲೂ ಗೊತ್ತಾಗಿದೆ. ಬಳಿಕ ಭೂಗರ್ಭಶಾಸ್ತ್ರಜ್ಞರು ಕೂಡ ಸ್ಪಷ್ಟಪಡಿಸಿದ್ದರು. ಗಜಗಿರಿ ಬೆಟ್ಟದ ಕಡೆಗೆ ಹರಿಯುತ್ತಿದ್ದ ಜಲಮೂಲ ಕಳೆದ ಒಂದು ವರ್ಷದಿಂದ ಅರ್ಚಕ ನಾರಾಯಣ ಆಚಾರ್ ಮನೆ ಬಳಿ ಬರಲು ಆರಂಭಿಸಿತ್ತು. ಆಗಲೇ ಅಷ್ಟಮಂಗಲ ಪ್ರಶ್ನೆ ಸಂದರ್ಭ, ಇಲ್ಲಿ ಜಲಗಂಡಾಂತರವಿದೆ ಎಂದು ಗೊತ್ತಾಗಿತ್ತು. ತಕ್ಷಣವೇ ತಮ್ಮ ಮನೆಯನ್ನು ಖಾಲಿ ಮಾಡುವಂತೆ ಅರ್ಚಕರಿಗೆ ಹಲವು ಬಾರಿ ಹೇಳಿದ್ದೆವು. ಈಗ ಗಜಗಿರಿಬೆಟ್ಟ ಕುಸಿದಿರುವ ಸ್ಥಳದಲ್ಲಿ ಭಾರೀ ಪ್ರಮಾಣದಲ್ಲಿ ಹರಿಯುತ್ತಿರುವ ಜಲವೇ ಅದೆಲ್ಲವನ್ನೂ ಸ್ಪಷ್ಟಪಡಿಸುತ್ತದೆ ಎಂದು ಮೂಲ ಸ್ವರೂಪ ರಕ್ಷಣಾ ವೇದಿಕೆ ಮುಖಂಡ ಸೋಮಣ್ಣ ತಿಳಿಸಿದ್ದಾರೆ.

ಒಟ್ಟಿನಲ್ಲಿ ಅಭಿವೃದ್ಧಿ ಹೆಸರಿನಲ್ಲಿ ತಲಕಾವೇರಿಯಲ್ಲಿ 15 ವರ್ಷದ ಹಿಂದೆ ನಡೆದಿರುವ ಅವೈಜ್ಞಾನಿಕ ಕಾಮಗಾರಿಗಳೇ ಬೆಟ್ಟ ಕುಸಿತಕ್ಕೆ ಕಾರಣ ಎನ್ನಲಾಗುತ್ತಿದೆ. ಜೊತೆಗೆ 2013ರಲ್ಲಿ ಬೆಟ್ಟದ ಮೇಲೆ ಇಂಗುಗುಂಡಿ ತೆಗೆದು ಅರಣ್ಯ ಇಲಾಖೆ ಮಾಡಿದ ಎಡವಟ್ಟು ಕೂಡ ಬೆಟ್ಟ ಕುಸಿಯಲು ಕಾರಣವಾಗಿರಬಹುದು ಎನ್ನಲಾಗುತ್ತಿದೆ. ಆದರೆ, ವೈಜ್ಞಾನಿಕ ಅಧ್ಯಯನದ ಬಳಿಕವಷ್ಟೇ ಈ ಭಾರೀ ದುರಂತಕ್ಕೆ ಕಾರಣ ಏನು ಎನ್ನೋದು ಸ್ಪಷ್ಟವಾಗಬೇಕಾಗಿದೆ.

ABOUT THE AUTHOR

...view details