ಕೊಡಗು (ತಲಕಾವೇರಿ): ಸಾವಿನ ಸೂತಕದ ಮಧ್ಯೆ ಮೃತರ ಸಂಬಂಧಿಕರಿಗೆ ನೀಡಿದ್ದ ಪರಿಹಾರ ಹಣದ ಹಂಚಿಕೆಯಲ್ಲಿ ಇದೀಗ ಕುಟುಂಬಸ್ಥರಲ್ಲೇ ಮನಸ್ತಾಪ ಮೂಡಿದೆ.
ಆಗಸ್ಟ್ 5 ರಂದು ತಲಕಾವೇರಿಯಲ್ಲಿ ಸಂಭವಿಸಿದ್ದ ಗುಡ್ಡ ಕುಸಿತದಿಂದ ಮೃತಪಟ್ಟಿದ್ದ ಅರ್ಚಕ ನಾರಾಯಣ ಆಚಾರ್ ಹಾಗೂ ಅವರ ಸಹೋದರ ಆನಂದ ತೀರ್ಥ ಸ್ವಾಮೀಜಿ ಇವರಿಬ್ಬರ ಕುಟುಂಬದವರಿಗೆ ಹಂಚಿದ್ದ ಪರಿಹಾರ ಹಣದಲ್ಲಿ ನಮಗೂ ಶೇ.50 ರಷ್ಟು ಪಾಲು ಬರಬೇಕೆಂದು ಮೃತ ನಾರಾಯಣ ಆಚಾರ್ ಅವರ ಮಕ್ಕಳು ಸೋದರ ಅತ್ತೆ ಸುಶೀಲಾ ಅವರೊಂದಿಗೆ ಮನಸ್ತಾಪ ಮಾಡಿಕೊಂಡಿದ್ದಾರೆ.
ಹಣ ಹಂಚಿಕೆ ವಿಚಾರಕ್ಕೆ ಕುಟುಂಬದಲ್ಲಿ ಕಲಹ ನಾರಾಯಣ ಆಚಾರ್ ಅಣ್ಣರಾದ ಆನಂದ ತೀರ್ಥರು ಬ್ರಹ್ಮಚಾರಿ ಆಗಿದ್ದರಿಂದ ಅವರ ಪರಿಹಾರದ ಹಣವನ್ನು ತಂಗಿ ಸುಶೀಲಗೆ ನೀಡಲಾಗಿತ್ತು. ಹಾಗೆಯೇ ನಾರಾಯಣ ಆಚಾರ್ ಇಬ್ಬರು ಹೆಣ್ಣು ಮಕ್ಕಳಿಗೆ ನಿನ್ನೆ ತಲಾ 2.5 ಲಕ್ಷ ಪರಿಹಾರ ಚೆಕ್ ವಿತರಿಸಲಾಗಿತ್ತು. ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ನಾರಾಯಣ ಆಚಾರ್ ಮಕ್ಕಳು ಆನಂದ ತೀರ್ಥ ಅವರನ್ನು ನಾವೇ ನೋಡಿಕೊಂಡಿದ್ದೆವು. ಹೀಗಾಗಿ ಚೆಕ್ ಸುಶೀಲಗೆ ನೀಡಿದ್ದು ಸರಿಯಲ್ಲ ಎಂದು ನಮಿತಾ ಮತ್ತು ಶಾರದಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಿನ್ನೆ ಭಾಗಮಂಡಲದಲ್ಲಿ ಸಚಿವ ವಿ. ಸೋಮಣ್ಣ ಚೆಕ್ ವಿತರಿಸಿದ್ದರು. ಈಗಾಗಲೇ ಚೆಕ್ ವಿತರಿಸಿದ್ದೇವೆ. ಅವರ ನಡುವಿನ ಜಗಳ ಅವರೇ ಇತ್ಯರ್ಥ ಮಾಡಿಕೊಳ್ಳಲಿದ್ದಾರೆ. ಇಂದು ಸಂಜೆಯೊಳಗೆ ಇತ್ಯರ್ಥ ಮಾಡಿಕೊಳ್ಳಲಿದ್ದಾರೆ ಎಂದು ಮಡಿಕೇರಿ ತಹಶೀಲ್ದಾರ್ ಮಹೇಶ್ ತಿಳಿಸಿದ್ದಾರೆ.