ಮಡಿಕೇರಿ: ಕೊಡಗು ಜಿಲ್ಲೆಯ ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯು ವಿದ್ಯುತ್ ಬಿಲ್ ಕಟ್ಟದ ಕಾರಣ ಚೆಸ್ಕಾಂನವರು ಪಂಚಾಯಿತಿ ವಿದ್ಯುತ್ ಕಡಿತಗೊಳಿಸಿದ್ದಾರೆ. ಜನಸಾಮಾನ್ಯರು ಪಂಚಾಯಿತಿಗೆ ಬಂದು ವಾಪಸಾಗುತ್ತಿದ್ದಾರೆ. ಸಿಬ್ಬಂದಿ ಸರಿಯಾದ ಸಮಯಕ್ಕೆ ಕಚೇರಿಗೆ ಬಂದರೂ ಯಾವುದೇ ಕೆಲಸವಿಲ್ಲದೆ ಸುಮ್ಮನೆ ಕೂರುವಂತಾಗಿದೆ.
ಪವರ್ ಇಲ್ಲದೇ ಪಂಚಾಯಿತಿಯ ಎಲ್ಲಾ ಕೆಲಸಗಳು ನಿಂತಿದ್ದು, ಜನಸಾಮಾನ್ಯರಿಗೆ ಸಮಸ್ಯೆಯಾಗಿದೆ. ಪಂಚಾಯಿತಿಯಿಂದ ‘ಸೆಸ್ಕ್’ ಗೆ ಲಕ್ಷಾಂತರ ರೂ. ವಿದ್ಯುತ್ ಬಿಲ್ ಪಾವತಿ ಬಾಕಿ ಇದೆ. ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರಿಂದ ದಿನನಿತ್ಯದ ಚಟುವಟಿಕೆ ಸ್ತಬ್ಧಗೊಂಡಿದೆ.
ಸುಂಟಿಕೊಪ್ಪ ಗ್ರಾ.ಪಂನಿಂದ ‘ಸೆಸ್ಕ್’ಗೆ 28 ಲಕ್ಷದ 66 ಸಾವಿರ ರೂ.ಗಳ ವಿದ್ಯುತ್ ಬಿಲ್ ಪಾವತಿಯಾಗಬೇಕು. ಈ ಬಗ್ಗೆ ಹಲವು ಬಾರಿ ಬಿಲ್ ಪಾವತಿಸಲು ನೋಟಿಸ್ ನೀಡಿದ್ದರೂ ಸಕಾರಾತ್ಮಕ ಸ್ಪಂದನೆ ದೊರೆಯದೇ ಇರುವುದರಿಂದ ಹಿರಿಯ ಅಧಿಕಾರಿಗಳ ಆದೇಶದ ಮೇರೆಗೆ ಗ್ರಾಮ ಪಂಚಾಯಿತಿ ಕಚೇರಿಯ ವಿದ್ಯುತ್ ಸಂಪರ್ಕವನ್ನು ನ. 4 ರಂದು ಕಡಿತಗೊಳಿಸಲಾಗಿದೆ.
ಪಂಚಾಯಿತಿ ಸುತ್ತಮುತ್ತಲಿನಲ್ಲಿ 7 ಗ್ರಾಮಗಳಿವೆ. ಜನರು ಸಮಸ್ಯೆಗಳನ್ನು ಹೊತ್ತು ಪಂಚಾಯಿತಿಗೆ ಬಂದರೂ ಯಾವುದೇ ಪರಿಹಾರ ಕೊಡಲು ಪಂಚಾಯಿತಿಗೆ ಸಾಧ್ಯವಾಗುತ್ತಿಲ್ಲ. ವಿದ್ಯುತ್ ಇಲ್ಲದೆ ಪಂಚಾಯಿತಿಯಲ್ಲಿ ಯಾವುದೇ ಪ್ರಿಂಟ್ಗಳನ್ನು ತೆಗೆಯಲಾಗುತ್ತಿಲ್ಲ.
28 ಲಕ್ಷ ರೂ.ಗೂ ಅಧಿಕ ಬಾಕಿ: 2022 ಮಾರ್ಚ್ 22 ರಂದು ‘ಸೆಸ್ಕ್’ ನಿಂದ ಪಂಚಾಯಿತಿಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿತ್ತು. ಎಚ್ಚೆತುಕೊಂಡ ಪಂಚಾಯಿತಿ ಹರಾಜು ಪಕ್ರಿಯೆಯಲ್ಲಿ 30 ಲಕ್ಷ ರೂ ಪಾವತಿಸಿತ್ತು. ಒಟ್ಟು 67 ಲಕ್ಷಕ್ಕೂ ಹೆಚ್ಚು ಮೊತ್ತದ ವಿದ್ಯುತ್ ಬಿಲ್ ಬಾಕಿಯಾಗಿದ್ದು, ಅದರಲ್ಲಿ ಈಗಾಗಲೇ ಒಂದು ಬಾರಿ 30 ಲಕ್ಷ ರೂ ಮತ್ತು ಮತ್ತೊಮ್ಮೆ 17 ಲಕ್ಷದ 25,000 ಸಾವಿರ ರೂ ಪಾವತಿ ಮಾಡಲಾಗಿದೆ. ಅದರೂ 28 ಲಕ್ಷ ರೂ.ಗೂ ಅಧಿಕ ಬಾಕಿ ಇರುವ ಹಿನ್ನೆಲೆಯಲ್ಲಿ ಸೆಸ್ಕ್ನ ಮೇಲಾಧಿಕಾರಿಗಳ ಆದೇಶದಂತೆ ವಿದ್ಯುತ್ ಕಡಿತಗೊಳಿಸಲಾಗಿದೆ.