ಕೊಡಗು: ಇದೇ ಅಕ್ಟೋಬರ್ 17ರಂದು ಜರುಗುವ ಕೊಡಗಿನ ಪವಿತ್ರ ಕಾವೇರಿ ತೀರ್ಥೋದ್ಭವ ವೀಕ್ಷಣೆಗೆ ಭಕ್ತರಿಗೆ ಮುಕ್ತ ಅವಕಾಶ ಕಲ್ಪಿಸಲಾಗುವುದೆಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಎರಡು ದಿನದ ತೀರ್ಥೋದ್ಭವಕ್ಕೆ ತಲಕಾವೇರಿಗೆ ಬರುವ ಭಕ್ತರು ಕಾಲು ನಡಿಗೆಯಲ್ಲಿಯೇ ಬರಬೇಕು. ವಾಹನಗಳನ್ನು ಭಾಗಮಂಡಲದಲ್ಲಿ ನಿಲ್ಲಿಸಬೇಕು. ಕೋವಿಡ್ ವರದಿ ಮತ್ತು ವ್ಯಾಕ್ಸಿನೇಷನ್ ಕಡ್ಡಾಯ ಮಾಡಲಾಗಿತ್ತು.
ಆದರೆ, ಈ ನಿಯಮದ ವಿರುದ್ದ ಕೊಡಗಿನ ಮೂಲ ನಿವಾಸಿಗಳು ತಿರುಗಿ ಬಿದ್ದ ನಂತರ ಮುಖ್ಯಮಂತ್ರಿ ಬೊಮ್ಮಾಯಿ ಅವರ ಗಮನಕ್ಕೆ ಬಂದಿತ್ತು. ಹೀಗಾಗಿ, ಜಿಲ್ಲಾಡಳಿತ ಕೊಡಗಿನ ನಿವಾಸಿಗಳಿಗೆ ಮತ್ತು ಪ್ರವಾಸಿಗರಿಗೆ ಅವಕಾಶ ಮಾಡಿಕೊಟ್ಟಿದೆ. ಭಕ್ತರು ದಯವಿಟ್ಟು ಕೋವಿಡ್ ನಿಯಮ ಪಾಲನೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಕೊಡಗಿನ ಭಕ್ತರ ಭಾವನೆಗೆ ಸರ್ಕಾರ ಗೌರವ ನೀಡಿದೆ. ಪವಿತ್ರ ತೀರ್ಥ ಕೊಂಡೊಯ್ಯಲು ಅವಕಾಶ ಕಲ್ಪಿಸಿದೆ. ಕೊಡಗಿನ ಜನ ಸ್ವಯಂ ನಿಯಮ ಪಾಲಿಸಿ ತೀರ್ಥೋದ್ಭವ ವೀಕ್ಷಿಸುತ್ತಾರೆ ಎಂಬ ನಂಬಿಕೆ ಇದೆ. ಆದ್ರೆ ತಲಕಾವೇರಿಯ ಕೊಳದಲ್ಲಿ ಪುಣ್ಯ ಸ್ನಾನ ಮಾಡಲು ಅವಕಾಶ ಇಲ್ಲ. ಕೊಡಗಿನ ಜನರಿಗೆ ಮತ್ತು ಹೊರಗಿನ ಭಕ್ತರಿಗೆ ಯಾವುದೇ ನಿರ್ಬಂಧ ವಿಧಿಸಿಲ್ಲ ಎಂದು ಅವರು ಹೇಳಿದರು.