ಕೊಡಗು: ಮೂರು ವರ್ಷದ ಹಿಂದೆ ಕಳೆದುಹೋಗಿದ್ದ ತಾಯಿಯನ್ನು ಮಗ ಮತ್ತೆ ಹುಡುಕಿ ಮನೆಗೆ ಕರೆದುಕೊಂಡು ಹೋಗಿರುವ ಕರುಣಾಜನಕಾ ಘಟನೆಯೊಂದು ಮಡಿಕೇರಿಯಲ್ಲಿ ನಡೆದಿದೆ.
ಮೈಸೂರಿನ ಕೆ.ಆರ್ ನಗರದ ಸಾಲಿಗ್ರಾಮದ ಮಹೇಶ್ ಮೂರು ವರ್ಷದ ಹಿಂದೆ ತಪ್ಪಿಸಿಕೊಂಡಿದ್ದ ತನ್ನ ತಾಯಿ ಪಾರ್ವತಿಯನ್ನು ಜಿಲ್ಲೆಯ ತುಂಬೆಲ್ಲ ಹುಡುಕಾಡಿದ್ದರು. ಮಾನಸಿಕ ಅಸ್ವಸ್ಥೆ ಆಗಿರುವ ತಾಯಿ ಎಲ್ಲಿದ್ದರೋ ಎಂಬ ಆತಂಕದಲ್ಲೇ ದಿನ ದೂಡುತ್ತಿದ್ದ ಮಗನಿಗೆ ಇದೀಗ ತಾಯಿಯ ಮಡಿಲು ಸೇರುವ ಭಾಗ್ಯ ದೊರಕಿದೆ.
3 ವರ್ಷದ ಬಳಿಕ ಕಳೆದುಹೋದ ತಾಯಿಯ ಮಡಿಲು ಸೇರಿದ ಪುತ್ರ ಮೂರು ವರ್ಷದ ಹಿಂದೆ ಗ್ರಾಮದಿಂದ ತಾಯಿ ತಪ್ಪಿಸಿಕೊಂಡಿದ್ದರು. ಬಳಿಕ ಪುತ್ರ ಮಹೇಶ್ ಎಲ್ಲ ಊರುಗಳಿಗೂ ಅಲೆದಾಡಿದ್ದರು. ಆದರೂ ತಾಯಿ ಪತ್ತೆಯಾಗಿರಲಿಲ್ಲ. ಹೀಗಿರುವಾಗ ಮಡಿಕೇರಿಯಲ್ಲಿ ಅಲೆದಾಡುತ್ತಿದ್ದ ಮಹಿಳೆ ಕಂಡು ಇಲ್ಲಿನ ಪೊಲೀಸರು ತನಲ್ ಸಂಸ್ಥೆಯ ವೃದ್ಧಾಶ್ರಮಕ್ಕೆ ಸೇರಿಸಿದ್ದರು. ಸಂಸ್ಥೆ ಸಹ ಮಹಿಳೆ ಕುಟುಂಬಸ್ಥರ ಹುಡುಕಾಟದಲ್ಲಿ ನಿರತರಾಗಿದ್ದರು.
ಬಳಿಕ ಹೇಗೋ ಸಂಸ್ಥೆಗೆ ಮಹಿಳೆಯ ಸ್ವಂತ ವಿಳಾಸ ಲಭ್ಯವಾಗಿದ್ದು, ಮಹಿಳೆ ಹೆಸರು ಪಾರ್ವತಿ ಎಂಬುದು ತಿಳಿದು ಬಂದಿತ್ತು. ಕಳೆದು ಹೋದ ತಾಯಿಗಾಗಿ ಮೂರು ವರ್ಷಗಳಿಂದ ಹುಡುಕಾಡಿ ಬೇಸತ್ತಿದ್ದ ಮಗ ಮಹೇಶ್, ನಮ್ಮ ಪಾಲಿಗೆ ನಮ್ಮ ತಾಯಿ ಇನ್ನಿಲ್ಲ ಎಂದು ಕೊಂಡಿದ್ದರಂತೆ. ಆದರೆ, ತನಲ್ ಸಂಸ್ಥೆಯು ಇವರಿಗೆ ಕರೆ ಮಾಡಿ ನಿಮ್ಮ ತಾಯಿ ಇಲ್ಲಿದ್ದಾರೆ ಎಂದು ತಿಳಿಸಿದಾಗ ಹೆತ್ತವ್ವನಿಗಾಗಿ ಹಗಲುರಾತ್ರಿ ಹುಡುಕಾಡುತ್ತಿದ್ದ ಮಗನ ಸಂತೋಷಕ್ಕೆ ಪಾರವೇ ಇರಲಿಲ್ಲ.
ಕೊನೆಗೂ ತನ್ನ ತಾಯಿ ಸಿಕ್ಕಳಲ್ಲಾ ಎಂದು ಸಾಲಿಗ್ರಾಮದಿಂದ ಮಡಿಕೇರಿಗೆ ಬಂದು ತನ್ನ ತಾಯಿಯನ್ನು ಮನೆಗೆ ಕರೆದೊಯ್ದಿದ್ದಾರೆ.