ಕರ್ನಾಟಕ

karnataka

ETV Bharat / state

ಕಾರ್ಗಿಲ್​ ವಿಜಯ್​ ದಿವಸ್​: ನೆನಪೊಂದೇ ಬದುಕು... ಪತ್ನಿ ಮನಸ್ಸಿನಲ್ಲಿ ಮಾಸಿಲ್ಲ ಪತಿಯ ಬಲಿದಾನ - ಕೊಡಗು ಜಿಲ್ಲೆ ವಿರಾಜಪೇಟೆ

ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಮೈತಡಿ ಗ್ರಾಮದ ಕಾವೇರಪ್ಪ ಭಾರತೀಯ ಸೇನೆಗೆ ಸೇರಿ 7 ವರ್ಷಗಳ ಕಾಲ ಶತ್ರುಗಳ ಎದೆ ಸೀಳಿದ್ದರು. ಸೇನೆಗೆ ಸೇರಿದ್ದ ಕೆಲವೇ ವರ್ಷಗಳಲ್ಲಿ ಶೋಭಾ ಅವರನ್ನು ವರಿಸಿದ್ದರು. ಇನ್ನು ಏಳೆಂಟು ವರ್ಷ ಸೇನೆಯಲ್ಲಿ ದುಡಿದು ಜಿಲ್ಲೆಗೆ ವಾಪಸ್ ಆಗಿ ದಾಂಪತ್ಯ ಜೀವನ ನಡೆಸಲು ನಿರ್ಧರಿಸಿದ್ದರು. ಆದರೆ 1999ರಲ್ಲಿ ನಡೆದ ಕಾರ್ಗಿಲ್​ ಕದನದಲ್ಲಿ ಪಾಪಿ ಪಾಕಿಸ್ತಾನದ ಕುತಂತ್ರದಿಂದ ಕೊಡಗಿನ ವೀರ ಯೋಧ ಕಾವೇರಪ್ಪ ಹುತಾತ್ಮರಾಗಿದ್ದರು.

soldier Kaverappa
ನೆನಪು ಒಂದೇ ಬದುಕು: ಪತ್ನಿಯ ಮನಸ್ಸಿನಲ್ಲಿ ಮಾಸಿಲ್ಲ ಪತಿಯ ಕಾರ್ಗಿಲ್ ಬಲಿದಾನ..!

By

Published : Jul 26, 2020, 12:36 PM IST

ಕೊಡಗು: ಜು. 26 ಇಡೀ ದೇಶವೇ ಮರೆಯದ ಅವಿಸ್ಮರಣೀಯ ದಿನ. 1999ರಲ್ಲಿ ನೆರೆಯ ಪಾಕಿಸ್ತಾನದ ಶತ್ರುಗಳ ಎದೆಸೀಳಿದ ಭಾರತೀಯ‌ ಸೈನಿಕರ ಜೊತೆಯಲ್ಲಿ ವೀರರ ನಾಡು ಕೊಡಗಿನ ಹುತಾತ್ಮ ಯೋಧ ಕಾವೇರಪ್ಪ ಶತ್ರುಗಳ ಗುಂಡಿಗೆ ಎದೆಯೊಡ್ಡಿ‌ ಕೆಚ್ಚೆದೆಯ ವೀರ ಎನಿಸಿಕೊಂಡಿದ್ದರು.‌ ಇವರ ಪತ್ನಿ ಶೋಭಾ ಯೋಧನ ನೆನಪಿನಲ್ಲೇ ಬದುಕು ದೂಡುತ್ತಿದ್ದಾರೆ.

ನೆನಪು ಒಂದೇ ಬದುಕು: ಪತ್ನಿಯ ಮನಸ್ಸಿನಲ್ಲಿ ಮಾಸಿಲ್ಲ ಪತಿಯ ಕಾರ್ಗಿಲ್ ಬಲಿದಾನ..!

ಕೊಡಗು ಎಂದರೆ ದೇಶಪ್ರೇಮ, ಸೈನಿಕರು ಹಾಗೂ ದೇಶ ಸೇವೆಗೆ ಸಾರ್ಥಕ ಸೇವೆ ಸಲ್ಲಿಸಿರುವ ಹುತಾತ್ಮ ಯೋಧರು ಕಣ್ಮುಂದೆ ಬರುತ್ತಾರೆ. ಕೊಡಗಿನಿಂದ ಸೇನೆಗೆ ಅದೆಷ್ಟು ದೊಡ್ಡ ಶಕ್ತಿ ಇತ್ತೆಂದರೆ, ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರಂತಹ ಮಹಾನ್ ವ್ಯಕ್ತಿಗಳನ್ನು ನೀಡಿದ ನಾಡು. ಹಾಗೆಯೇ 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಶತ್ರುಗಳೊಂದಿಗೆ ಹೋರಾಡುತ್ತಲೇ ವೀರಮರಣವನ್ನಪ್ಪಿದ ಹುತಾತ್ಮರು ಇದ್ದಾರೆ.

ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಮೈತಡಿ ಗ್ರಾಮದ ಕಾವೇರಪ್ಪ ಭಾರತೀಯ ಸೇನೆಗೆ ಸೇರಿ 7 ವರ್ಷಗಳ ಕಾಲ ಶತ್ರುಗಳ ಎದೆ ನಡುಗಿಸಿದ್ದವರು. ಸೇನೆಗೆ ಸೇರಿದ್ದ ಕೆಲವೇ ವರ್ಷಗಳಲ್ಲಿ ಶೋಭಾ ಅವರನ್ನು ವರಿಸಿದ್ದರು. ಇನ್ನು ಏಳೆಂಟು ವರ್ಷ ಸೇನೆಯಲ್ಲಿ ದುಡಿದು ಜಿಲ್ಲೆಗೆ ವಾಪಸ್ ಆಗಿ ದಾಂಪತ್ಯ ಜೀವನ ನಡೆಸಲು ನಿರ್ಧರಿಸಿದ್ದರು. ಆದರೆ 1999 ರಲ್ಲಿ ಪಾಪಿಸ್ತಾನದ ಎದುರು ಕಾರ್ಗಿಲ್​ನಲ್ಲಿ ಹತ್ತಾರು ದಿನಗಳ ಕಾಲ ಶತ್ರುಗಳ ಎದೆ ಸೀಳಿ ಭಾರತಾಂಬೆಯ ರಕ್ಷಣೆಗೆ ನಿಂತಿದ್ದರು. ಆದರೆ ಪಾಪಿ ಪಾಕಿಸ್ತಾನದ ಕುತಂತ್ರದಿಂದ ಕೊಡಗಿನ ವೀರ ಯೋಧ ಕಾವೇರಪ್ಪ ಹುತಾತ್ಮರಾಗಿದ್ದರು.

ತಾನು ಮದುವೆಯಾದ ಸ್ವಲ್ಪ ದಿನಕ್ಕೆ ಅವರು ಕರ್ತವ್ಯದ ನಿಮಿತ್ತ ತೆರಳಿದರು. ಮತ್ತೆ ನಾನು ಅವರನ್ನು ನೋಡಲು ಸಾಧ್ಯವಾಗಿದ್ದೇ ಹುತಾತ್ಮರಾದರು ಎನ್ನುವಾಗ ಶೋಭಾ ಅವರ ಕಣ್ಣಾಲಿಗಳು ಈಗಲೂ ಒದ್ದೆಯಾಗುತ್ತವೆ. ದೇಶದ ಗಡಿಗಳಲ್ಲಿ ಗಲಾಟೆಗಳಾಗುತ್ತಿದ್ದರೆ, ಇಂದಿಗೂ ಅಂದಿನ ಕಾರ್ಗಿಲ್ ಯುದ್ಧವೇ ನೆನಪಾಗುತ್ತೆ. ಅಂದು ನಾನಷ್ಟೇ ಅಲ್ಲ, ನನಗಿಂತ ಚಿಕ್ಕ ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳು ಕಾರ್ಗಿಲ್ ಯುದ್ಧದಲ್ಲಿ ತಮ್ಮ ಪತಿಯನ್ನು ಕಳೆದುಕೊಂಡರು. ಆ ನೋವುಗಳು ಇಂದಿಗೂ ತೀವ್ರವಾಗಿ ಕಾಡುತ್ತವೆ. ದೇಶಕ್ಕಾಗಿ ಅವರು ಪ್ರಾಣವನ್ನೇ ತೆತ್ತರು. ನಾನು ದೇಶಕ್ಕಾಗಿ ಏನು ಕೊಟ್ಟೆ ಎನ್ನುವ ಪ್ರಶ್ನೆಗಳು ಕಾಡುತ್ತವೆ. ಭಾರತವು ಕಾರ್ಗಿಲ್ ಅನ್ನು ಜಯಿಸಿದ ದಿನ ಇಂದಿಗೂ ಮೈತಡಿಯಲ್ಲಿರುವ ನನ್ನ ಪತಿಯ ಸಮಾಧಿ ಮುಂದೆ ನಿಂತು ನಮಸ್ಕರಿಸುತ್ತೇನೆ. ಕೊಡಗಿನಲ್ಲಿ ಸೇನೆಗೆ ಅಪಾರ ಸೇವೆ ಸಲ್ಲಿಸಿದವರಿದ್ದಾರೆ. ಆದರೆ ಇತ್ತೀಚೆಗೆ ಸೇನೆಗೆ ಸೇರುವವರ ಸಂಖ್ಯೆಯೇ ಕಡಿಮೆ ಆಗಿದೆ ಎನ್ನುತ್ತಾರೆ ಹುತಾತ್ಮ ಯೋಧ ಕಾವೇರಪ್ಪ ಅವರ ಪತ್ನಿ ಶೋಭಾ.

ಒಟ್ಟಿನಲ್ಲಿ ದೇಶಕ್ಕಾಗಿ ಹೋರಾಡುತ್ತಲೇ ಯೋಧ ಕಾವೇರಪ್ಪ ಪ್ರಾಣಬಿಟ್ಟಿದ್ದರೆ, ಅಂದಿನಿಂದಲೂ ಪತ್ನಿ ಶೋಭಾ ಅವರ ನೆನಪಿನಲ್ಲೇ ಮಡಿಕೇರಿಯ ಮನೆಯಲ್ಲಿ ಬದುಕು ಸಾಗಿಸುತ್ತಿದ್ದಾರೆ. ಹುತಾತ್ಮರಾದಾಗ ಸರ್ಕಾರ ನನ್ನ ಬದುಕಿಗಾಗಿ 2 ಲಕ್ಷ ರೂ. ಪರಿಹಾರ ಕೊಟ್ಟಿದ್ದು ಬಿಟ್ಟರೆ, ಮತ್ಯಾವುದೇ ಸೌಲಭ್ಯ ಕೊಡಲಿಲ್ಲ. ದೇಶಕ್ಕಾಗಿ ಪ್ರಾಣ ತೆತ್ತ ಅವರಿಗೆ ಯಾವುದೇ ಗೌರವ ನೀಡಲಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ABOUT THE AUTHOR

...view details