ಕೊಡಗು: ಕಳೆದ ವರ್ಷದ ಮಹಾಮಳೆಗೆ ಮಂಜಿನ ನಗರಿ ಮಡಿಕೇರಿ ಅಕ್ಷರಶಃ ದ್ವೀಪದಂತಾಗಿತ್ತು. ಹಾಗೆಯೇ ಭಾಗಮಂಡಲ ಹಾಗೂ ತಲಕಾವೇರಿ ಸಂಪರ್ಕಿಸುವ ರಸ್ತೆ ಮಾರ್ಗದಲ್ಲಿ ನೀರು ಉಕ್ಕಿ ಹರಿಯುತ್ತಿದ್ದರಿಂದ ರಸ್ತೆ ಸಂಪರ್ಕವನ್ನೂ ಕಳೆದುಕೊಂಡಿತ್ತು. ಈ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಸರ್ಕಾರ ಮೇಲ್ಸೇತುವೆ ನಿರ್ಮಿಸಲು ಮುಂದಾಗಿತ್ತಾದರೂ ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ.
8 ತಿಂಗಳ ಹಿಂದೆ ಗುತ್ತಿಗೆದಾರರು ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದರೂ, ನಾಲ್ಕು ಪಿಲ್ಲರ್ಗಳ ನಿರ್ಮಾಣವಷ್ಟೇ ಆಗಿದೆ. ಉಳಿದಂತೆ ಕಾಮಗಾರಿಗಾಗಿ ಸುರಿದಿರುವ ಜೆಲ್ಲಿರಾಶಿ, ಕಬ್ಬಿಣದ ವಸ್ತುಗಳು ಮಾತ್ರ ಕಾಮಗಾರಿಯ ಸ್ಥಳದಲ್ಲಿ ಕಂಡು ಬರುತ್ತಿದೆ. ಆಮೆಗತಿಯಲ್ಲಿ ಸಾಗುತ್ತಿರುವ ಕಾಮಗಾರಿಯನ್ನು ಕಂಡು ಅದು ಪೂರ್ಣಗೊಳ್ಳಬೇಕಾದರೆ ಇನ್ನೂ ಮೂರು ವರ್ಷಗಳು ಬೇಕಾಗಬಹುದು. ನಾವು ಮಳೆಗಾಲದಲ್ಲಿ ದೋಣಿಯನ್ನೇ ಅವಲಂಬಿಸಬೇಕಾಗುತ್ತೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಗುತ್ತಿಗೆದಾರನ ನಿರ್ಲಕ್ಷ್ಯಕ್ಕೆ ಸ್ಥಳೀಯರು ಆಕ್ರೋಶ ಕಳೆದ ಬಾರಿ ಸುರಿದ ಮಳೆಯಿಂದ ದೈನಂದಿನ ವಸ್ತುಗಳನ್ನು ಕೊಳ್ಳುವುದೇ ಕಷ್ಟವಾಗಿತ್ತು. ಹದಿನೈದು ದಿನಗಳ ಕಾಲ ಮನೆಯಲ್ಲೇ ಕಾಲ ಕಳೆದಿದ್ದೆವು. ಅನಾರೋಗ್ಯ ಬಿದ್ದರೆ ಆಸ್ಪತ್ರೆಗೆ ಹೋಗಲು ವಾಹನಗಳ ವ್ಯವಸ್ಥೆಯೇ ಇರಲಿಲ್ಲ. 8 ತಿಂಗಳ ಹಿಂದೆಯೇ ಕಾಮಗಾರಿ ಶುರುವಾಗಿದೆ. ಗುತ್ತಿಗೆದಾರರು ಮೇಲ್ಸೇತುವೆ ನಿರ್ಮಾಣದ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದು, ಸದ್ಯಕ್ಕೆ ನಾಲ್ಕೈದು ಪಿಲ್ಲರ್ಗಳನ್ನಷ್ಟೆ ಮಾಡಿದ್ದಾರೆ. ಆದಷ್ಟು ಬೇಗ ಮೇಲ್ಸೇತುವೆ ಪೂರ್ಣಗೊಂಡರೆ ಎಲ್ಲರಿಗೂ ಅನುಕೂಲ ಅಲ್ಲವೇ ಅಂತಾರೆ ಸ್ಥಳೀಯ ನಿವಾಸಿ ಗೋದಾವರಮ್ಮ.
ಗುತ್ತಿಗೆದಾರರು ಕೆಲಸವನ್ನು ಆಮೆಗತಿಯಲ್ಲಿ ಮಾಡುತ್ತಿದ್ದಾರೆ. ಹೀಗಾಗಿ ಹೊರಗಿನಿಂದ ತಲಕಾವೇರಿ, ಭಗಂಡೇಶ್ವರ ದೇವಾಲಯಕ್ಕೆ ಬಂದವರು ಹಲವು ಬಾರಿ ನಿರಾಸೆಯಿಂದ ಸಂಪರ್ಕವಿಲ್ಲದೆ ವಾಪಸ್ಸಾಗುತ್ತಾರೆ.ಕೂಡಲೇ ಜಿಲ್ಲಾಡಳಿತ ಮೇಲ್ಸೇತುವೆ ಕೆಲಸವನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.