ಕೊಡಗು: ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕಾನೂರು ಗ್ರಾಮದಲ್ಲಿ ಮೂವರು ಸಜೀವ ದಹನಗೊಂಡಿದ್ದು, ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ.
ರಾತ್ರಿ ಮನೆಯಲ್ಲಿ ಮಲಗಿದ್ದ ವೇಳೆ ಎರವರ ಬೋಜ ಎಂಬಾತ ಮದ್ಯ ಸೇವಿಸಿ ಬಂದು, ಎರವರ ಮಂಜು ಎಂಬುವವರ ಮನೆಯ ಬಾಗಿಲನ್ನು ಹೊರಗಿನಿಂದ ಲಾಕ್ ಮಾಡಿ ಬೆಂಕಿ ಹಚ್ಚಿದ್ದಾನೆ.
ಮನೆಯಲ್ಲಿದ್ದ ಎಂಟು ಜನರಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಉಳಿದ ಐವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅವರಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ಕೊಡಗು ಎಸ್ಪಿ ದೃಢಪಡಿಸಿದ್ದಾರೆ. ಇನ್ನಿಬ್ಬರಿಗೆ ಚಿಕಿತ್ಸೆ ಮುಂದುವರೆದಿದೆ.
ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕಿನ ಕಾನೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಮದ್ಯದ ಅಮಲಿನಲ್ಲಿ ಎರವರ ಬೋಜ ಎಂಬಾತ ದುಷ್ಕೃತ್ಯ ಎಸಗಿದ್ದಾನೆ.
ಬೇಬಿ (40), ಸೀತೆ (45), ಪ್ರಾರ್ಥನ (6) ಸಜೀವ ದಹನಗೊಂಡಿದ್ದು, ವಿಶ್ವಾಸ್(3), ಪ್ರಕಾಶ್(7), ವಿಶ್ವಾಸ್(6) ಮೈಸೂರಿನ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಭಾಗ್ಯ (40) ಪಾಚೆ (60) ಗಾಯಾಳುಗಳು.
ಈ ಸಂಬಂಧ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.