ಕೊಡಗು: ರಾಜ್ಯದ ಹಲವು ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಬಿದ್ದಿದೆ. ರಾಜ್ಯದಲ್ಲಿ 5 ಲಕ್ಷದ 23 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ ಆಗಿದೆ. ಇವತ್ತಿನವರೆಗೆ ಸರ್ವೇ ಮಾಡಿ ಪರಿಹಾರ ಕೊಡುವ ಪ್ರಯತ್ನವನ್ನು ಸರ್ಕಾರ ಮಾಡಿಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿ ಸರ್ಕಾರಕ್ಕೆ ಮಳೆಹಾನಿಯ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಕೊಡಗಿನಲ್ಲಿ ಮಳೆಹಾನಿ ಆದ ಪ್ರದೇಶಗಳಿಗೆ ಭೇಟಿ ಕೊಟ್ಟು ಪರಿಶೀಲನೆ ಮಾಡಿದ್ದೇನೆ. 2018, 19, 20ರಲ್ಲಿ ಆದ ಮಳೆಯ ಹಾನಿಗೆ ಸರ್ಕಾರ ಇನ್ನೂ ಕೂಡ ಪರಿಹಾರ ನೀಡಿಲ್ಲ. ಸೇತುವೆ ತಡೆಗೋಡೆಗಳನ್ನು ತೀರಾ ಕಳಪೆಯಾಗಿ ಮಾಡಿದ್ದಾರೆ. ಅದಕ್ಕೆ ಅವೆಲ್ಲಾ ಹೀಗಾಗಿವೆ ಎಂದರು.
ಸಿದ್ದರಾಮಯ್ಯ ಭೇಟಿಗೆ ಬಿಜೆಪಿ, ಹಿಂದೂಪರ ಸಂಘಟನೆ ವಿರೋಧ ವಿಚಾರವಾಗಿ ಪ್ರತಿಕ್ರಿಯಿಸಿ, ಬಿಜೆಪಿಯವರು ಕಾರ್ಯಕರ್ತರನ್ನ ಬಿಟ್ಟು ಪ್ರತಿಭಟನೆ ಮಾಡಿಸುತ್ತಾರೆ. ಈ ಬಾರಿ ಕೊಡಗಿನಲ್ಲಿ ಎರಡೂ ಕಡೆ ಕಾಂಗ್ರೆಸ್ ಗೆಲ್ಲುತ್ತೆ ಅಂತ ಬಿಜೆಪಿ ಹತಾಶರಾಗಿ ಹೀಗೆ ಪ್ರತಿಭಟನೆ ಮಾಡಿದ್ದಾರೆ. ನಮಗೆ ಮೊಟ್ಟೆ ಎಸೆಯೋಕೆ ಬರಲ್ವಾ? ನಾವು ಅಲ್ಲಿಂದಲೇ ಪ್ರತಿಭಟನೆ ಮಾಡಿಕೊಂಡು ಬಂದಿರೋದು. ನಾವು ಹೋರಾಟ ಮಾಡೋಕೆ ಶುರು ಮಾಡಿದ್ರೆ ಸಿಎಂ ಎಲ್ಲೂ ಓಡಾಡೋಕೆ ಆಗಲ್ಲ. ನಮ್ಮ ಕಾರ್ಯಕರ್ತರು ಬೀದಿಗಿಳಿದ್ರೆ ಬಿಜೆಪಿಯವರಿಗೆ ಕೊಡಗಿನಲ್ಲೇ ತಿರುಗಾಡೋಕೆ ಆಗಲ್ಲ ಎಂದು ಸಿದ್ದರಾಮಯ್ಯ ಎಚ್ಚರಿಕೆ ರವಾನಿಸಿದರು.
ಟಿಪ್ಪು ವಿಚಾರನೂ ಇಲ್ಲ, ಏನೂ ಇಲ್ಲ. ಟಿಪ್ಪು ಜಯಂತಿ ಆದ್ಮೇಲೆ ನಾನು ಕೊಡಗಿಗೆ ಬಂದಿಲ್ವಾ? ಕಳಪೆ ಕೆಲಸ ನನಗೆ ಗೊತ್ತಾಗದಿರಲಿ ಅಂತ ಮಾತ್ರ ಪ್ರತಿಭಟನೆ ಮಾಡಿಸಿದ್ದಾರೆ ಎಂದು ಹರಿಹಾಯ್ದರು.